ಚಿನ್ನದ ಹುಡುಗ ರಾಮು ಮಾತುಗಳು......
ನಾನು ರಾಮು. ಎಂ. ಎಸ್. ನನ್ನ ತಾಯಿ ಶ್ರೀಮತಿ ಎಲ್.ಎನ್. ತನುಜಾ ಮತ್ತು ತಂದೆ ಶ್ರೀಯುತ ಎಂ.ಆರ್. ಶ್ರೀನಿವಾಸ್, ನಾವು ದೇವಾಂಗ ಸಮಾಜಕ್ಕೆ ಸೇರಿದ್ದು, ನೇಕಾರಿಕೆ ನಮ್ಮ ಮೂಲ ಕಸುಬು. ನಮ್ಮ ಅಪ್ಪ-ಅಮ್ಮನಿಗೆ ಇಬ್ಬರು ಮಕ್ಕಳು, ನಮ್ಮ ಅಕ್ಕ ಶ್ರೀಮತಿ. ಎಂ.ಎಸ್. ರಜನಿ, ಬಿ.ಇ.(ಕಂಪ್ಯೂಟರ್ ಸೈನ್ಸ್) ಮಾಡಿರುತ್ತಾರೆ. ನಾನು ಸೆಪ್ಟಂಬರ್ 21ರಂದು ನಡೆದ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ 55ನೇ ಘಟಿಕೋತ್ಸವದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮಾನ್ಯ ಕೃಷಿ ಸಚಿವರಾದ ಶ್ರೀ. ಬಿ.ಸಿ. ಪಾಟೀಲ್ ಹಾಗೂ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಸ್. ರಾಜೇಂದ್ರ ಪ್ರಸಾದ್ ರವರಿಂದ ಎಂ.ಎಸ್ಸಿ.(ಕೃಷಿ) ಪದವಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕೆ 6 ಚಿನ್ನದ ಪದಕಗಳನ್ನು ಪಡೆದುಕೊಂಡೆ.
ನನ್ನ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೇಳುವುದಾದರೆ ನಾನು ದೊಡ್ಡಬಳ್ಳಾಪುರದ ಭೀಮಯ್ಯ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಗಳನ್ನು ಮುಗಿಸಿದೆ. ಮನೆಯಲ್ಲಿನ ಕಷ್ಟ, ಅಂದಿನ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಶಾಲೆಯನ್ನು ಬಿಡಿಸ ಬೇಕಾದ ಸಂದರ್ಭ ಬಂದಿತ್ತು. ನಮ್ಮ ತಂದೆ ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೂ ಅವರಿಗೆ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ದೊಡ್ಡಬಳ್ಳಾಪುರದ ಹೃದಯ ಭಾಗ ಮಾರುಕಟ್ಟೆ ಚೌಕದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆಗೆ ಒಂದನೇ ತರಗತಿಗೆ ದಾಖಲಾತಿ ಮಾಡಿಸಿದರು. ಇಂದಿನ ಸಂದರ್ಭದಲ್ಲಿ ಸರ್ಕಾರಿ ಶಾಲೆ ಅಂದ್ರೆ ಕೆಟ್ಟದಾಗಿ ನೋಡುವ ಕಾಲದಲ್ಲಿ, ನಾನು ಸರ್ಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮದಲ್ಲೇ ಓದಿದ್ದು ಎಂದು ಹೇಳಲು ಹೆಮ್ಮೆ ಯಾಗುತ್ತಿದೆ. ಕಾರಣ ನಮಗೆ ಇದ್ದ ಅಂದಿನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿ, ಎಲ್ಲಾ ರೀತಿಯ ಬುದ್ಧಿ ಹೇಳಿ, ಶಿಕ್ಷಣ ನೀಡುತ್ತಿದ್ದರು.
ನಮ್ಮಂತಹ ಬಡ ಮಕ್ಕಳಿಗೆ ಸರ್ಕಾರಿ ಶಾಲೆಯ ಉಚಿತ ಪುಸ್ತಕ, ಬಟ್ಟೆ, ಮಧ್ಯಾಹ್ನದ ಬಿಸಿ ಊಟ, ಒಳ್ಳೆ ಶಿಕ್ಷಣಗಳು ನನ್ನನ್ನು ಆಕರ್ಷಣೆ ಮಾಡಿದ್ದವು. ಕೆ. ಮಹಾಲಿಂಗಯ್ಯ, ಕೆ.ಜಿ. ಮುನಿರಾಜು, ಬನ್ನಪ್ಪ, ಎನ್.ಆರ್. ಲತಾ, ಬಿ.ಎಲ್. ಕವಿತಾ, ಹೆಚ್. ಪುಟ್ಟಗಂಗಮ್ಮ.....ಇನ್ನೂ ಶಿಕ್ಷಕರು ನನ್ನ ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕಿದರು. ಸರ್ಕಾರಿ ಶಾಲೆಯಾದರೂ ಪ್ರತೀ ಶನಿವಾರ ಒಂದಲ್ಲ ಒಂದು ಸ್ಪರ್ಧೆ ಏರ್ಪಡಿಸುತ್ತಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ, ಗೆದ್ದು ಖುಷಿ ಪಡುವ ಸಂತೋಷಕ್ಕೆ ಅವಕಾಶ ಕಲ್ಪಿಸಿ ಕೊಟ್ಟವರು ನನ್ನ ಪ್ರಾಥಮಿಕ ಶಾಲೆ ಶಿಕ್ಷಕರು. ನಮ್ಮ ಮಾರುಕಟ್ಟೆ ಶಾಲೆಯಲ್ಲಿ ಅಂದಿನಿಂದಲೂ ತಾಲ್ಲೂಕು ಮಟ್ಟದ ಅಂತರ ಶಾಲಾ ಕನ್ನಡ ಚರ್ಚಾಸ್ಪರ್ಧೆಯನ್ನು ಶಾಲೆಯ ವಾರ್ಷಿಕೋತ್ಸವದ ದಿನದಂದು ಏರ್ಪಡಿಸಿ, ಪಾರಿತೋಷಕ ಬಹುಮಾನ ನೀಡುತ್ತಿದ್ದರು. ಅಂದು ನನ್ನನ್ನು ನಮ್ಮ ಶಾಲೆಯಿಂದ ಆಯ್ಕೆ ಮಾಡಿ, ಭಾಷಣ ಮಾಡಲು ಅವಕಾಶ ಕಲ್ಪಿಸಿದರು, ಅಂದು ಬಿತ್ತಿದ ಭಾಷಣ ಕಲೆ ನನ್ನನ್ನು ಎಲ್ಲಾ ಹಂತದಲ್ಲೂ ಮುಂದೆ ಬರುವಂತೆ ಮಾಡಿತು. ಮತ್ತೊಂದು ಉತ್ತಮ ಗುಣ ಎಂದರೆ ಪ್ರತೀ ದಿನ ಶಾಲೆಗೆ ಬರುವಾಗ ತಾಯಿ ಕಾಲಿಗೆ ನಮಸ್ಕಾರ ಮಾಡಿ ಬರುವಂತೆ ಅಂದು ನಮ್ಮ ಶಾಲೆಯ ಒಂದನೇ ತರಗತಿ ಶಿಕ್ಷಕರು ಹೇಳಿದ್ದರು. ಪ್ರತೀ ದಿನ ಬೆಳಿಗ್ಗೆ ಹಾಜರಾತಿ ಹಾಕಿದ ನಂತರ ಮಕ್ಕಳನ್ನು ಕೇಳುತ್ತಿದ್ದರು, ಮಕ್ಕಳೇ ಇಂದು ಯಾರು ಯಾರು ತಾಯಿ ಕಾಲಿಗೆ ನಮಸ್ಕಾರ ಹಾಕಿ ಬಂದಿದ್ದೀರಾ ಕೈ ಮೇಲೆ ಮಾಡಿ? ಎಂದು, ಅಂದು ಅವರು ಹೇಳಿದ ಹಾಗೆ ಕೈ ಮೇಲೆ ಮಾಡಬೇಕು ಎಂದು ನಾನು ಪ್ರಾರಂಭ ಮಾಡಿದ್ದು ಇಂದಿಗೂ ನಾನು ಮನೆಯಿಂದ ಹೊರಗೆ ಕಾಲಿಡಲು ಮುಂಚೆ ತಾಯಿಗೆ ಕಾಲಿಗೆ ನಮಸ್ಕಾರ ಮಾಡಿ ಹೋಗುವ ಸಂಸ್ಕಾರ ಹೇಳಿಕೊಟ್ಟ ಶಾಲೆ ನಮ್ಮ ಮಾರುಕಟ್ಟೆ ಶಾಲೆ. ಅಲ್ಲಿಂದ ನಾನು ಪ್ರೌಢ ಶಿಕ್ಷಣಕ್ಕೆಂದು ಶ್ರೀ ಕೊಂಗಾಡಿಯಪ್ಪ ಪ್ರೌಢ ಶಾಲೆಗೆ ಸೇರಿದೆ. ಅಲ್ಲಿ 8ನೇ ತರಗತಿಗೆ ಸೇರುವಾಗ ನನ್ನ ಅಕ್ಕ ಆಗ ತಾನೇ 10ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದರು. ನಮ್ಮ ಕೊಂಗಾಡಿಯಪ್ಪ ಪ್ರೌಢ ಶಾಲೆಯಲ್ಲಿ ಅಂದಿನಿಂದಲೂ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡುವ ಪ್ರತೀತಿ ನಡೆದು ಬಂದಿತ್ತು. ನಾನು ಆಗ ತಾನೇ ಶಾಲೆಗೆ ಸೇರಿದ್ದೆ, ಶಾಲೆ ಪ್ರಾರಂಭವಾದ 2 ತಿಂಗಳಿಗೆ ನಮ್ಮ ಅಕ್ಕನವರಿಗೆ ಸನ್ಮಾನ ಮಾಡಿ ಚಿನ್ನದ ಪದಕವನ್ನು ನೀಡಿದ್ದರು. ಇದು ನನಗೆ ಸ್ಪೂರ್ತಿಯಾಗಿತ್ತು. ಇಲ್ಲಿ ಆಂಗ್ಲ ಮಾಧ್ಯಮಕ್ಕೇ ಸೇರಿದ್ದೆ, ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದು ಕೊಂಡಿದ್ದೆ, ನನ್ನ ಪ್ರೀತಿಯ ಸಂಸ್ಕೃತ ಶಿಕ್ಷಕಿ ಶ್ರೀಮತಿ. ಎ. ಜ್ಯೋತ್ಸ್ನಾ ರವರು ಕಲಿಸಿದ ಸಂಸ್ಕಾರಗಳು ನನ್ನನ್ನು ಇನ್ನೂ ಹೆಚ್ಚು ಓದುವುದರ ಕಡೆಗೆ ತಿರುಗುವಂತೆ ಮಾಡಿದ್ದವು. 3 ವರ್ಷ ಶಾಲೆಗೆ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣನಾಗಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಸನ್ಮಾನ ಸ್ವೀಕರಿಸಿದೆ. ನಂತರ ಪದವಿ ಪೂರ್ವ ಶಿಕ್ಷಣವನ್ನು ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನಲ್ಲಿ, ಅಲ್ಲೂ ಕೂಡ ವಿಜ್ಞಾನ ವಿಷಯದಲ್ಲಿ ಡಿಸ್ಟಿಂಕ್ಷನ್ ದರ್ಜೆಯಲ್ಲಿ ಉತ್ತೀರ್ಣನಾದೆ. ವಿಜ್ಞಾನ ಪುಸ್ತಕಗಳನ್ನು ಕೊಂಡು ಕೊಳ್ಳುದೇ ಅಂದು ಶ್ರೀ ಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್ (ರಿ.) ದೊಡ್ಡಬಳ್ಳಾಪುರ ಇವರು ನೀಡುತ್ತಿದ್ದ ಪುಸ್ತಕಗಳನ್ನು ಪ್ರಥಮ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಪಡೆದು ಓದಿ, ನಂತರ ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಬಿ.ಎಸ್ಸಿ. (ಕೃಷಿ) ಸೀಟನ್ನು ಕೃಷಿ ಮಹಾವಿದ್ಯಾಲಯ, ಮಂಡ್ಯದಲ್ಲಿ ಪಡೆದು ಅಲ್ಲಿನ ಕೃಷಿ ಶಿಕ್ಷಣದಲ್ಲೂ ಖುಷಿಯನ್ನು ಕಂಡೆ, ಮನೆಯಲ್ಲಿನ ಸಹಕಾರ ಮತ್ತು ಉತ್ತಮ ಸ್ನೇಹಿತರ ಒಡನಾಟ ನನ್ನನ್ನು ಒಳ್ಳೆಯ ಮಾರ್ಗಕ್ಕೆ ಕರೆದು ಕೊಂಡು ಹೋಗಿತ್ತು. ನಂತರ ಎಂ.ಎಸ್ಸಿ.(ಕೃಷಿ) ಪದವಿಯನ್ನು ಮಾಡಬೇಕೆಂಬ ಆಸೆಯಿಂದ ಪ್ರವೇಶ ಪರೀಕ್ಷೆ ಬರೆದು, ರಾಜ್ಯಕ್ಕೆ 6ನೇ ರಾಂಕ್ ಗಳಿಸಿದ್ದೆ. ಜಿಕೆವಿಕೆ ಕೃಷಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ., ಪದವಿಗೆ ಸೇರಿದೆ. ನನಗೆ 20 ವರ್ಷ ವಯಸ್ಸಾದರೂ ಅಪ್ಪ ಅಮ್ಮನ ಬಳಿ ಹಣ ಕೇಳಲು ಬಹಳ ಮುಜಗರವಾಗುತ್ತಿತ್ತು. ಎಂ.ಎಸ್ಸಿ., ಮೊದಲ ವರ್ಷದಲ್ಲಿ ಮೆರಿಟ್ ಸ್ಕಾಲರ್ ಶಿಪ್ ಪಡೆದೆ. ನನ್ನ ಸಂಶೋಧನಾ ಪ್ರಧಾನ ಸಲಹೆಗಾರರಾದ ಡಾ. ಕೆ. ಬಿ. ಉಮೇಶ್ ಅವರ ಬಳಿ ನನ್ನ ಆರ್ಥಿಕ ಸಂಕಷ್ಟವನ್ನೂ ಹೇಳಿ ಕೊಂಡಾಗ ಅವರು ನಮ್ಮ ವಿಶ್ವ ವಿದ್ಯಾನಿಲಯದಲ್ಲಿ ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆಯಾಗಿದೆ. ಅಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸ ನಿರ್ವಹಿಸಿ ಫೆಲೋಶಿಪ್ ಪಡೆಯಬಹುದು ಎಂದು ತಿಳಿಸಿದರು.
ಅವರು ಹೇಳಿದಂತೆ ಸೇರಿಕೊಂಡು ಅಲ್ಲಿ ಕೆಲಸ ನಿರ್ವಹಿಸಿ ಫೆಲೋಶಿಪ್ ಪಡೆದು, ನನ್ನ ಆರ್ಥಿಕ ಸ್ಥಿತಿಯನ್ನು ನಾನೇ ನಿರ್ವಹಿಸುತ್ತಿದ್ದೆ. ಸಂಶೋಧನಾ ಪ್ರಬಂಧ ಬರೆಯುವ ಸಂರ್ಭದಲ್ಲಿ ಡಾ. ಉಮೇಶ್ ಸರ್ ರವರೇ ಲಾಪ್ ಟಾಪ್ ಕೊಡಿಸಿದ್ದರು. ಅವರ ಸಲಹೆ ಮಾರ್ಗದರ್ಶನಗಳು ನನ್ನನ್ನು ಯಾವಾಗಲೂ ಕೆಲಸದಲ್ಲಿ ಮಗ್ನನಾಗಿರುವಂತೆ ಮಾಡಿದ್ದವು. ಅವರು ನೀಡಿದ್ದ ಸಂಶೋಧನಾ ವಿಷಯ ಮಾವು ಪ್ರವಾಸೋಧ್ಯಮ, ಇದೊಂದು ನೂತನ ಮಾರಾಟ ವ್ಯವಸ್ಥೆ. ಕೃಷಿ ಪ್ರವಾಸೋದ್ಯಮದ ತರಹ ಮಾವು ಪ್ರವಾಸೋದ್ಯಮ. ಮಾವು ಬೆಳೆಯಲ್ಲಿ ನೇರ ಮಾರಾಟ ಮಾಡಿ ರೈತರು ಅಧಿಕ ಲಾಭ ಗಳಿಸುವ ಆರ್ಥಿಕತೆಯನ್ನು ನನ್ನ ಸಂಶೋಧನೆಯಿಂದ ತಿಳಿದು ಬಂದಿತ್ತು. 2020ರ ಅಕ್ಟೋಬರ್ ತಿಂಗಳಲ್ಲಿ ಪಿ.ಡಿ.ಸಿ. ಪಡೆದು ಪಿಹೆಚ್.ಡಿ. ಪದವಿ ಪಡೆಯಬೇಕೆಂದು ಮನಸ್ಸು ಮಾಡಿ ಪ್ರವೇಶ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಪುನಃ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗಕ್ಕೇ ಸೇರಿದೆ.
ಪ್ರಸ್ತುತ 2021 ಸೆಪ್ಟಂಬರ್ 21ರಂದು ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ೫೫ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ. (ಕೃಷಿ) ಪದವಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ್ದಕ್ಕೆ 1 ವಿಶ್ವ ವಿದ್ಯಾನಿಲಯ ಚಿನ್ನದ ಪದಕವನ್ನು ಮತ್ತು 5 ದಾನಿಗಳ ಚಿನ್ನದ ಪದಕಗಳನ್ನು (ಡಾ. ಎನ್. ಪಿ. ಪಾಟೀಲ್ ಚಿನ್ನದ ಪದಕ, ಡಾ. ಬಿಸಿಲಯ್ಯಾ ಎಂಡೋಮೆಂಟ್ ಚಿನ್ನದ ಪದಕ, ಶ್ರೀಮತಿ. ನಂಜಮ್ಮ ಮತ್ತು ಶ್ರೀ. ರೇವಣ್ಣ ಸ್ಮಾರಕ ಚಿನ್ನದ ಪದಕ, ಸಿಂಡಿಕೇಟ್ ಬ್ಯಾಂಕ್ ಮಣಿಪಾಲ್ ಚಿನ್ನದ ಪದಕ, ಪ್ರೊ. ಹೆಚ್. ಎಸ್. ಕೃಷ್ಣ ಸ್ವಾಮಿ ಸ್ಮಾರಕ ಚಿನ್ನದ ಪದಕ) ಪಡೆದದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ನಮ್ಮ ಅಪ್ಪ-ಅಮ್ಮ ಅಂದು ಸಾಕು ನೀನು ಓದಿದ್ದು ಎಂದು ಹೇಳಿದ್ದರೆ, ನಾನು ಇಂದು ಪಿಹೆಚ್ಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಅನೇಕ ಸಾಲಗಳ ಮಧ್ಯೆಯೂ ನನಗೆ ಹಣವನ್ನು ನೀಡಿ ಓದಲು ಸಹಕರಿಸಿದ ನನ್ನ ಪೋಷಕರಿಗೆ ನನ್ನ ಅನಂತ ಅನಂತ ಧನ್ಯವಾದಗಳು. ಅಪ್ಪ ಅಮ್ಮ ಮನೆಯಲ್ಲಿ ಆದರೆ, ಆಕರ್ಷ್ ಮತ್ತು ವಿನಯ್ ಎಂಬ ಉತ್ತಮ ಸ್ನೇಹಿತರು ನನಗೆ ನೈತಿಕವಾಗಿ ಸಲಹೆ ನೀಡಿ ನನ್ನ ಬೆಳವಣಿಗೆ ಕಾರಣರಾಗುತ್ತಾರೆ.
ನಮ್ಮ ವಿಭಾಗದಲ್ಲಿಯೂ ಸಹ ರವಿ, ಹಂಸ, ಗುರು, ಉದಯ್ ಎಂಬ ಸೀನಿಯರ್ಸ್ ಮಾಡಿರುವ ಸಹಾಯ ಮರೆಯುವಂತೆ ಇಲ್ಲ. ಓದುವ ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಹೇಳುವುದೇನೆಂದರೆ ಯಾವ ವಿಷಯವೇ ಆಗಲಿ ಶ್ರದ್ಧೆಯಿಂದ ಓದಿ, ದೇವರ ಮೇಲೆ ನಂಬಿಕೆ ಇಟ್ಟರೆ, ಎಲ್ಲವೂ ಸಾಧ್ಯ ಎನ್ನುವುದು ನನ್ನ ಅಭಿಪ್ರಾಯ. ಕಾರಣ ನಮ್ಮ ಮನೆಯಲ್ಲಿ ಪ್ರತೀ ದಿನವೂ ಮೊದಲು ಪೂಜೆ ಉಳಿದದ್ದು ನಂತರ, ಈತರ ನಮ್ಮ ಅಪ್ಪ ಅಮ್ಮ ನಡೆದು ಕೊಂಡು ಬಂದಿದ್ದಾರೆ. ನಂಬಿಕೆ ಎನ್ನುವ 3 ಅಕ್ಷರ ನಮ್ಮನ್ನು ಒಳ್ಳೆ ಹಂತಕ್ಕೆ ತಲುಪಿಸುತ್ತದೆ ಎಂಬ ಆಶಯ.
ಸ್ವಗತ ಬರಹ-ರಾಮು
Comments