ಶ್ರದ್ಧಾ ಭಕ್ತಿಗಳಿಂದ ಮಹಾ ಶಿವರಾತ್ರಿ ಆಚರಣೆ






ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು ಶ್ರದ್ದಾ ಭಕ್ತಿ, ಸಡಗರದಿಂದ ಆಚರಿಸಲಾಯಿತು. ಶಿವನ ದೇವಾಲಯಗಳಿಗೆ ನೂರಾರು ಭಕ್ತರು ತೆರಳಿ, ಪೂಜೆ ಸಲ್ಲಿಸಿತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗಿನಿಂದ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಮನೆಗಳಲ್ಲಿ ಪೂಜೆ, ಫಲಹಾರ ಸೇವನೆ ಆಚರಣೆಗಳು ನಡೆದವು. ಶ್ರದ್ಧಾಳುಗಳು ಸಂಪ್ರದಾಯದಂತೆ ಉಪವಾಸ, ಪೂಜೆಗಳಲ್ಲಿ ನಿರತರಾಗಿದ್ದರು.
ನಗರದ ಶ್ರೀ ನಗರೇಶ್ವರ ದೇವಾಲಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ನಗರದ ಚಿಕ್ಕಪೇಟೆಯ ಶ್ರೀ ಕಾಶೀ ವಿಶ್ವೇಶ್ವರ ದೇವಾಲಯ, ಶ್ರೀನಗರದ ಮಲೈ ಮಾದೇಶ್ವರ ದೇವಾಲಯ, ಶ್ರೀ ರಾಮಲಿಂಗ ಚೌಡೇಶ್ವರಿ, ಶ್ರೀ ಚಂದ್ರಮೌಳೇಶ್ವರ ದೇವಾಲಯ, ರುಮಾಲೆ ವೃತ್ತದ ಶ್ರೀ ಗಣಪತಿ ದೇವಾಲಯ, ಬಸವಭವನದ ಬಳಿಯ ಸೋಮೇಶ್ವರ ದೇವಾಲಯ, ತೇರಿನ ಬೀದಿಯಲ್ಲಿರುವ ಚಂದ್ರಮೌಳೇಶ್ವರ ದೇವಾಲಯ, ಶ್ರೀಕಂಠೇಶ್ವರ ದೇವಾಲಯ, ಕುಚ್ಚಪ್ಪನಪೇಟೆಯ ಕಾಳಿಕ ಕಮಟೇಶ್ವರ, ತಾಲೂಕಿನ ಕೊಂಡಸಂದ್ರದ ಶ್ರೀ ಕಾಶೀ ವಿಶ್ವೇಶ್ವರ ದೇವಾಲಯ, ಬಸವಣ್ಣ ದೇವಾಲಯ ಮೊದಲಾದ ಕಡೆ, ಮಹಾಶಿವರಾತ್ರಿ ಅಂಗವಾಗಿ, ಸ್ವಾಮಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಶ್ರವಣೂರಿನ ನೀಲಕಂಠೇಶ್ವರ ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರದಲ್ಲಿನ ಇತಿಹಾಸ ಪ್ರಸಿದ್ದ ಮುಕ್ಕಣ್ಣೇಶ್ವರ ದೇವಾಲಯದಲ್ಲಿ ಶಿವಲಿಂಗ ಮೂರ್ತಿಗೆ ಬೆಳಗಿನಿಂದಲೇ ಅಭಿಷೇಕ, ಅಲಂಕಾರ ಮಾಡಲಾಗಿತ್ತು. ವಡ್ಡರಹಳ್ಳಿ ಗ್ರಾಮದಲ್ಲಿನ ಬಸವಣ್ಣ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ನೂರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.
ಮಾಕಳಿ ಬೆಟ್ಟದಲ್ಲಿ ಪ್ರತಿ ವರ್ಷದಂತೆ ಮಾಕಳಿ ಮಲ್ಲೇಶ್ವರ ಸ್ವಾಮಿಯ ದೇವಾಲಯ, ದೊಡ್ಡಬೆಳವಂಗಲ ಸಮೀಪದ ರಾಂಪುರದ ತೋಪಯ್ಯನ ದೇವಾಲಯ, ಹುಲುಕುಡಿ ಬೆಟ್ಟದಲ್ಲಿನ ವೀರಭದ್ರಸ್ವಾಮಿ, ರಾಜಘಟ್ಟ ಈಶ್ವರ ದೇವಾಲಯ, ಅರಳುಮಲ್ಲಿಗೆಯಲ್ಲಿನ ಬಯಲು ಬಸವಣ್ಣ, ನಗರದ ಮುಖ್ಯರಸ್ತೆಯಲ್ಲಿನ ನಗರೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಬೆಳಗಿನಿಂದಲೇ ನೂರಾರು ಜನ ಭಕ್ತಾದಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತಿದ್ದ ದೃಶ್ಯ ಕಂಡುಬಂತು.
ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಗ್ರಾಮಗಳಾದ ಮಾಡೇಶ್ವರ, ಬೈರಾಪುರ, ಮಾಕಳಿ ಬೆಟ್ಟ, ರಾಜಘಟ್ಟ, ಶ್ರವಣೂರು, ಅಂಬಲಗೆರೆ, ಯಲಾದಹಳ್ಳಿ, ದರ್ಗಾಜೋಗಹಳ್ಳಿ, ಇಸ್ತೂರು, ಹಣಬೆ, ತೂಬಗೆರೆ ಹೋಬಳಿಯ ಕೊಂಡಸಂದ್ರದ ಕಾಶಿ ವಿಶ್ವನಾಥ ದೇವಾಲಯ, ರಾಂಪುರದ ತೋಪನಯ್ಯಸ್ವಾಮಿ ಹಾಗೂ ನಗರದಲ್ಲಿನ ನಗರೇಶ್ವರ, ಬಸವಣ್ಣ, ಸೋಮೇಶ್ವರ,ಚಂದ್ರಮೌಳೇಶ್ವರ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು.
ತಾಲೂಕಿನ ಮರಳೇನಹಳ್ಳಿಯಲ್ಲಿ ಶಿವರಾತ್ರಿ ವಿಶೇಷ ಉತ್ಸವ ನಡೆಯಿತು.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಸಮೀಪದ ತೋಪನಯ್ಯಸ್ವಾಮಿ (ಶಿವ) ದೇವಸ್ಥಾನದ ಬಳಿ ಬಿಲ್ವಪತ್ರೆಯ ವನವಿದ್ದು, ಶಿವರಾತ್ರಿ ಅಂಗವಾಗಿ ಇಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.
ಶಿವರಾತ್ರಿ ಜಾಗರಣೆ :
ತೂಬಗೆರೆ ಸಮೀಪದ ಕೊಂಡಸಂದ್ರದಲ್ಲಿ ಕಾಶಿ ವಿಶ್ವೇಶ್ವರನಾಥ ಸ್ವಾಮಿ ದೇವಾಲಯದಲ್ಲಿ ಶಿರಾತ್ರಿ ಅಂಗವಾಗಿ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವರಾತ್ರಿ ಅಂಗವಾಗಿ ತಾಲೂಕು ಕಲಾವಿದರ ಸಂಘ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಅಖಂಡ ಭಜನಾ ಕಾರ್ಯಕ್ರಮ ನಡೆಯಿತು.
Comments