21 ಪಕ್ಷಗಳಿರೋ ಮಹಾ ಘಟಬಂಧನದಲ್ಲಿ ತನ್ನ ಪ್ರಧಾನಿ ಇವರೆ ಎಂದು ಹೇಳೋ ಧಂ ಯಾರಿಗೂ ಇಲ್ಲ! ಅರ್ಹತೆ ಕೂಡಾ ಅವರಲ್ಲಿಲ್ಲಾ…ಬಚ್ಚೇಗೌಡ

03 Apr 2019 6:09 PM |
1229 Report

ದಿನಾಂಕ 03-04-2019 ಬುಧವಾರ ಬೆಳಿಗ್ಗೆ 1೦:30 ಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ಏಳು ಗ್ರಾಮ ಪಂಚಾಯಿತಿಗಳಾದ ರಾಜಘಟ್ಟ, ಬಾಷೆಟ್ಟಿಹಳ್ಳಿ, ಮಜರಾಹೊಸಳ್ಳಿ, ಕೊಡಿಗೇಹಳ್ಳಿ, ಕಸಬಾ 1 / 2 ಮತ್ತು ದರ್ಗಾಜೋಗಳ್ಳಿ ಕಾರ್ಯಕರ್ತರ ಸಮಾವೇಶವನ್ನು ರಘುನಾಥಪುರ ಎನ್.ಎಸ್. ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದರು, ಕಾರ್ಯಕರ್ತರ ಸಮಾವೇಶಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಚಾಲಕ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಯಲಹಂಕ ಶಾಸಕ ವಿಶ್ವನಾಥ್ ಮಾತನಾಡಿ ಈ ಚುನಾವಣೆ ಎಲ್ಲಾ ಚುನಾವಣೆಗಳಂತಲ್ಲ, ಲೋಕಸಭಾ ಸದಸ್ಯನ ಆಯ್ಕೆ ಅತೀ ಮುಖ್ಯವಾದದ್ದು, ದೇಶವನ್ನು ಉಳಿಸಿಕೊಳ್ಳುವಂತದ್ದು, ಎಪ್ಪತ್ತು ವರ್ಷ ದೇಶವಾಳಿದ ಕಾಂಗ್ರೆಸ್ ಇನ್ನೂ ಬಡವರಿಗೆ ಎಲ್ಲಾ ಉಚಿತವಾಗಿ ನೀಡುವ ಮಾತನ್ನಾಡುತ್ತಿದೆ, ಕಾಶ್ಮೀರದಲ್ಲಿರುವ 370ನೇ ವಿಧಿಯನ್ನು ಹಾಗೇ ಉಳಿಸಿಕೊಳ್ಳುವ, ಮುಸ್ಲಿಮರಿಗೆ ಪ್ರತ್ಯೇಕವಾದ ಕಾನೂನು ತರುವ ಪ್ರಣಾಳಿಕೆಯನ್ನು ಬಿಟ್ಟಿದೆ, ದೇಶ ದ್ರೋಹಿ ಕಾಂಗ್ರೆಸ್ ಪಕ್ಷ ಸೋಲಿಸಿ, ಎಲ್ಲಕ್ಕಿಂತ ಮಿಗಿಲಾದದ್ದು ನಮ್ಮ ದೇಶ, ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿಯವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ, ಕಳೆದೆರಡು ಬಾರಿ ಸಂಸದರಾಗಿರುವ ಮೊಯಿಲಿ ಎತ್ತಿನಹೊಳೆಯ ಹೆಸರು ಹೇಳಿಕೊಂಡು ಗೆಲ್ಲುತ್ತಿದ್ದಾರೆ, ಎತ್ತಿನಹೊಳೆಯ ಕಾಮಗಾರಿ ಆಗಿರುವುದು ಬರೀ 26 ಕಿಲೋಮೀಟರ್ ಮಾತ್ರ, ಅದು ಮುಗಿಯುವುದು ಯಾವಾಗಾ? ಎಂದು ಪ್ರಶ್ನಿಸಿದರು. 

ಲೋಕಸಭಾ ಅಭ್ಯರ್ಥಿ ಬಚ್ಚೇಗೌಡ ಮಾತನಾಡಿ ಈ ಬಾರಿ ನೇರಾನೇರ ಸ್ಪರ್ಧೆ ಇದೆ, ಜಾತಿ ನೋಡಿ ಓಟು ಹಾಕೋ ಚುನಾವಣೆಯಲ್ಲಾ ಇದು. ದೇಶದ ಅಭಿವೃದ್ಧಿಗಾಗಿ ಚುನಾವಣೆ, ಮಂಗಳೂರಿನಿಂದ ತಪ್ಪಿಸಿಕೊಂಡು ಬಂದಿರುವ ಮೊಯಿಲಿ ಇಲ್ಲಿನ ಎಲ್ಲಾ ಕೆಲಸಗಳನ್ನು ತನ್ನದೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ, ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆ ನೆನಪಿಸಿಕೊಂಡು ಮತದಾರರ ಮೂಗಿಗೆ ತುಪ್ಪ ಸವರಿ 10ವರ್ಷದಿಂದ ಅಧಿಕಾರ ಅನುಭವಿಸಿದ ಮೋಯ್ಲಿಗೆ ಈ ಬಾರಿ ಕ್ಷೇತ್ರ ಕಬ್ಬಿಣದ ಕಡಲೆಯಾಗಲಿದೆ. ಐದು ವರ್ಷದಿಂದ ಕೇಂದ್ರದಲ್ಲಿ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸ ಜನರ ಮೆಚ್ಚುಗೆ ಗಳಿಸಿವೆ. ಆದ್ದರಿಂದ ಈ ಬಾರಿ ಬಿಜೆಪಿಗೆ ಭದ್ರ ಭವಿಷ್ಯವಿದೆ ಎಂದು ಹೇಳಿದರು.

ಕಳ್ಳರಿರೋ ಕಾಂಗ್ರೆಸ್ ಪಕ್ಷದ ಕೈಯ್ಯಲ್ಲಿ 6೦ ವರ್ಷ ದೇಶ ಸಿಕ್ಕಿ ನರಳಿದ್ದು ಸಾಕು,21 ಪಕ್ಷಗಳಿರೋ ಮಹಾಘಟಬಂಧನದಲ್ಲಿ ತನ್ನ ಪ್ರಧಾನಿ ಇವರೆ ಎಂದು ಹೇಳೋ ಧಂ ಯಾರಿಗೂ ಇಲ್ಲ! ಅರ್ಹತೆ ಕೂಡಾ ಅವರಲ್ಲಿಲ್ಲಾ. ಇವತ್ತು ದೊಡ್ಡಬಳ್ಳಾಪುರಕ್ಕೆ ಪ್ರತಿದಿನ ಮೂವತ್ತು ಸಾವಿರ ಮಂದಿ ಬಂದು ಇಲ್ಲಿನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ, ಉದ್ಯಮಗಳು ಬಂದರೆ ತಾನೆ ಉದ್ಯೋಗ ಸಿಗೋದು, ದೊಡ್ಡಬಳ್ಳಾಪುರಕ್ಕೆ ಮೊಯಿಲಿ ಕೊಡುಗೆ ಏನು? ಇಲ್ಲಿ ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿಸಿದ್ದು, ನರೇಗಾ ಯೋಜನೆ ಅನುಷ್ಠಾನಕ್ಕೆ ತಂದವರು ನಾವುಗಳೇ, ಇದೆಲ್ಲಾ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾದ ಅನುಮೋದನೆಗೊಂಡ ಯೋಜನೆಗಳು, ಯಜಮಾನನಿಲ್ಲದ ಮನೆಯಂತಾಗಿದೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಮೇಳೇಕೋಟೆ ಚಿದಾನಂದ ತಮ್ಮ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರೂ ಹಾಗೂ ಗ್ರಾಮಸ್ಥರೊಂದಿಗೆ ಇಂದು ಜೆಡಿಎಸ್ ಪಕ್ಷ ಬಿಟ್ಟು ವಿಶ್ವನಾಥ್ ಮತ್ತು ಬಚ್ಚೇಗೌಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡರು, ಇವರೊಂದಿಗೆ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ಮೂಲ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರಿದರು. ಕಾರ್ಯಕ್ರಮದಲ್ಲಿ ಕೆ.ಎಂ. ಹನುಮಂತರಾಯಪ್ಪ, ಸಂಚಾಲಕ ಸಚ್ಚಿದಾನಂದಮೂರ್ತಿ, ಬಿ.ಸಿ. ನಾರಾಯಣಸ್ವಾಮಿ, ಸತ್ಯನಾರಾಯಣ ಗೌಡ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ನಮೋ ಭಾರತ್ ಸಂಸ್ಥಾಪಕ ರವಿ ಮಾವಿನ ಕುಂಟೆ, ನಮೋಸೇನೆ ಕೆಂಪೇಗೌಡ ಮತ್ತು ಸದಸ್ಯರು, ಅಶ್ವಥ್ನಾರಾಯಣ, ನಗರ ಅಧ್ಯಕ್ಷ ರಂಗರಾಜು, ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಶಿವು, ಪುಷ್ಪ ಶಿವಶಂಕರ್, ವತ್ಸಲ ಜಗನ್ನಾಥ್, ನಗರ ಮಹಿಳಾ ಮೋರ್ಚ ಅಧ್ಯಕ್ಷೆ ಗಿರಿಜ, ಖಜಾಂಚಿ ಉಮಾಮಹೇಶ್ವರಿ, ಕಮಲ ಶ್ರೀನಿವಾಸ್, ವತ್ಸಲ ಸತ್ಯನಾರಾಯಣ್ ಮತ್ತಿತರರು ಹಾಜರಿದ್ದರು, ರಾಂಕಿಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಟಿ.ವಿ.ಲಕ್ಷ್ಮೀನಾರಾಯಣ್ ಸ್ವಾಗತಿಸಿದರು. ಕಸಬಾ ಹೋಬಳಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ವಿವಿಧ ಮೋರ್ಚಾದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಬೂತ್ ಮಟ್ಟದ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು, ಬೂತ್ ನ ಎಲ್ಲಾ ಸದಸ್ಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

Edited By

Ramesh

Reported By

Ramesh

Comments