ದೇಹ ಮಣ್ಣಿಗೆ ಉಸಿರು ಕನ್ನಡಕ್ಕೆ! ಕನ್ನಡ ಜಾಗೃತಿ ವೇದಿಕೆಯ 25 ನೇ ವರ್ಷದ ಬೆಳ್ಳಿ ಹಬ್ಬ
ದಿನಾಂಕ 17-3-2019 ರ ಭಾನುವಾರದಂದು ಮಧ್ಯಾನ್ಹ 2-3೦ಕ್ಕೆ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಮಂಜುನಾಥ್ ದೇವಣ್ಣ ಅವರನ್ನು ಕನ್ನಡ ಜಾಗೃತಿ ವೇದಿಕೆಯ 25 ನೇ ವರ್ಷದ ಬೆಳ್ಳಿ ಹಬ್ಬ ಆಚರಿಸುತ್ತಿರುವ ಸವಿನೆನಪಿಗಾಗಿ ಅಭಿನಂದಿಸುವ ಕಾರ್ಯಕ್ರಮವನ್ನು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾ ಮತ್ತು ದೊಡ್ಡಬಳ್ಳಾಪುರ ಘಟಕದ ವತಿಯಿಂದ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ಸೋಮು ವಿಶ್ವಕರ್ಮ, ಬೆಂ.ಗ್ರಾ.ಜಿಲ್ಲಾ ಉಪಾಧ್ಯಕ್ಷ ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ವಿಮಲಮ್ಮ, ಉಪಾಧ್ಯಕ್ಷ ಮಂಜೇಗೌಡ, ರಾಜ್ಯ ಕಾರ್ಯದರ್ಶಿ ಕೋದಂಡಮೂರ್ತಿ, ಜನಾ ಬ್ಯಾಂಕ್ ಮ್ಯಾನೇಜರ್ ಆವಣ್ಣ ಹೆಚ್. ಬಿರಾದಾರ್ ಆಗಮಿಸಿದ್ದರು. ತಾ.ಗೌ.ಅಧ್ಯಕ್ಷ ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತಾ.ಘಟಕದ ಅಧ್ಯಕ್ಷ ನಾಗರಾಜ್, ಯಾವುದೇ ಜನಪರವಾದ ಹೋರಾಟಗಳನ್ನು ಜಾಗೃತಿ ವೇದಿಕೆ ವತಿಯಿಂದ ಮುನ್ನುಗ್ಗಿ ಹೋರಾಡುತ್ತೇವೆ, ಸಾಮಾನ್ಯ ಜನರಿಗೆ ಸರ್ಕಾರದ ಎಲ್ಲಾ ಅನುಕೂಲಗಳು ತಲುಪಿಸಲು ರಾಜ್ಯ ಸಂಘದ ಮಾರ್ಗದರ್ಶನದಲ್ಲಿ ತಾಲ್ಲೂಕು ಸಂಘಟನೆ ಕೆಲಸ ಮಾಡುತ್ತದೆ ಎಂದರು. ಬೆಂ.ಗ್ರಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಘಟಕದ ಕೆಲಸ ಕಾರ್ಯಗಳ ಪರಿಚಯ ಮಾಡಿ ಕೊಟ್ಟರು. ಕನ್ನಡ ಜಾಗೃತಿ ವೇದಿಕೆಯ 25 ವರ್ಷಗಳ ಅಧ್ಯಕ್ಷರ ಸಾಧನೆಯ ಕುರಿತು ಬೆಂಗಳೂರು ಗ್ರಾ.ಜಿ.ಅಧ್ಯಕ್ಷ ಹರೀಶ್ ವಿವರಿಸಿ, 1993 ರಲ್ಲಿ ಹುಟ್ಟಿದ ಕಜಾವೇ ರಾಜ್ಯದಿಂದ ಹೊರ ಹೋಗಿ ಹೋರಾಟ ಮಾಡುವ ಏಕೈಕ ಸಂಘಟನೆ ಇದಾಗಿದೆ, ಅವರ ಮಾರ್ಗದರ್ಶನ ದಲ್ಲಿ ಮುಂದೆ ಉತ್ತಮ ಕಾರ್ಯ ಮಾಡುವಂತೆ ತಾಲ್ಲೂಕು ಘಟಕದ ಪದಾಧಿಕಾರಿಗಳಿಗೆ ಕರೆ ನೀಡಿದರು. ರಾಜ್ಯ ಘಟಕದ ಉಪಾಧ್ಯಕ್ಷ ಮಂಜೇಗೌಡ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ, ಯಾವುದೇ ಜಾತಿ ಭೇದ ಇಲ್ಲದೆ ನೆಡೆಯುತ್ತಿರುವ ಸಂಘಟನೆ ಎಂದರೆ ಅದು ಕನ್ನಡ ಜಾಗೃತಿ ವೇದಿಕೆ, ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು, ಉಳಿಸಿ ಬೆಳೆಸಬೇಕು,ನೆಲ ಜಲ ಹೋರಾಟಕ್ಕೆ ಎಂದೂ ಹಿಂಜರಿಯುವುದಿಲ್ಲ ಎಂದರು.
ಅಧ್ಯಕ್ಷ ಭಾಷಣ ಮಾಡಿದ ಮಂಜುನಾಥ್ ದೇವಣ್ಣ ಮಾತನಾಡಿ, ಕನ್ನಡ ಜಾಗೃತಿ ಅನ್ನುವುದು ಎಲ್ಲಾ ಮಾತನಾಡುತ್ತಾರೆ, ಶಾಶ್ವತ ಕುಡಿಯುವ ನೀರಿಗಾಗಿ ಪ್ರೋ.ನಂಜಂಡಪ್ಪ ವರದಿ ಜಾರಿಗೆ ಬರುವಂತೆ ದೊಡ್ಡಬಳ್ಳಾಪುರದಿಂದ ಪಾದಯಾತ್ರೆ ಮಾಡಿದ್ದೆವು, ದೇಹ ಮಣ್ಣಿಗೆ ಉಸಿರು ಕನ್ನಡಕ್ಕೆ, 20ಸಾವಿರ ಶಾಲೆಗಳನ್ನು ಸರ್ಕಾರವೇ ಮುಚ್ಚಿದೆ, ಶಿಕ್ಷಕರನ್ನ ನೇಮಕಾತಿ ಮಾಡದೇ ಮುಚ್ಚಲಾಗಿದೆ, ಪ್ರತೀ ಜಿಲ್ಲೆಗಳಲ್ಲಿ ಒಬ್ಬೊಬ್ಬ ರಾಜಕಾರಣಿ ಕೈಯಲ್ಲಿ ಒಂದೊಂದು ಶಾಲೆ ಇದೆ, ಹೀಗಿರುವಾಗ ಸರ್ಕಾರಿ ಶಾಲೆಗಳು ಎಲ್ಲಿ ಉದ್ಧಾರವಾಗುತ್ತವೆ? ಈ ವಿಷಯವಾಗಿ ರಾಜ್ಯದಲ್ಲಿ ಆಂದೋಳನ ನೆಡೆಯಬೇಕು, ನಮ್ಮ ಭಾಷೆ ಉಳಿಸಿ ಕೊಳ್ಳಲು ಹೋರಾಟ ಮಾಡುವ ಕಾಲ ಬಂದಿದೆ ನಾಡಿನ ಜನರ ಭಾಷೆ ಬಗ್ಗೆ ಕಾಳಜಿ ಇಲ್ಲದ ಜನ ಅಧಿಕಾರ ಹಿಡಿದುಕೊಂಡು ಇದ್ದಾರೆ, ಯಾರು ಸರ್ಕಾರಿ ಶಾಲೆಯಲ್ಲಿ ಓದುತ್ತಾರೋ ಅವರಿಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ.ರವಿಚಂದ್ರ, ಖಜಾಂಚಿ ಸಿ.ಎಸ್.ಮಂಜುನಾಥ್, ಕಾರ್ಯದರ್ಶಿ ಕೆ.ಆರ್.ಸುಧಾಕರ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.
Comments