ಅಸತೋಮಾ ಸದ್ಗಮಯ

05 Feb 2019 9:41 AM |
2118 Report

ಸನ್ಮಾನ್ಯ ಸುಪ್ರೀಂ ಕೋರ್ಟಿಗೆ ಇತ್ತೀಚೆಗೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಂತು. ಕೇಂದ್ರೀಯ ಶಾಲೆಗಳಲ್ಲಿ ಬೆಳಗಿನ ಹೊತ್ತು ಕಡ್ಡಾಯ ಪ್ರಾರ್ಥನೆ ಇದೆ. ಅದರಲ್ಲಿ ಹಿಂದೂಗಳ ಧರ್ಮಗ್ರಂಥಗಳಿಂದ ಆಯ್ದ ಶ್ಲೋಕಗಳನ್ನು ಹೇಳಿಸುತ್ತಾರೆ. ಇದು ಸೆಕ್ಯುಲರ್ ಕಲ್ಪನೆಗೆ ವಿರುದ್ಧವಾದದ್ದು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಯಾವ ಶ್ಲೋಕ ಹಾಡಿಸುತ್ತಾರೆ ಎಂದು ಪರಿಶೀಲಿಸಿದಾಗ ಗೊತ್ತಾದದ್ದು, ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ, ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿಮಂತ್ರವನ್ನು ಹಾಡಿಸುತ್ತಿದ್ದಾರೆ ಎಂಬುದು. ಈ ವಿವಾದದ ಕುರಿತು ನಡೆದ ಒಂದು ಟಿವಿಚರ್ಚೆಯಲ್ಲಿ ಪಿಐಎಲ್ ಹಾಕಿದ ವ್ಯಕ್ತಿಯೇ ಸ್ವತಃ ಹಾಜರಿದ್ದರು. ಸುದ್ದಿನಿರೂಪಕರು ಮತ್ತು ಅ ವ್ಯಕ್ತಿಯ ನಡುವೆ ನಡೆದ ಸಂಭಾಷಣೆ ನೋಡಿ:

ನಿರೂಪಕ: ಇದು ಹಿಂದೂಗಳ ಧರ್ಮಶ್ಲೋಕ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ?

ಅರ್ಜಿದಾರ: ಸಂಸ್ಕೃತದಲ್ಲಿ ಇದೆಯಲ್ಲ!

ನಿ: ಸಂಸ್ಕೃತದಲ್ಲಿ ಇರೋದೆಲ್ಲ ಹಿಂದೂಗಳ ಶ್ಲೋಕವೇ ಆಗಿರಬೇಕಾ? ಇರಲಿ! ಈ ಶ್ಲೋಕ ಯಾವ ಧರ್ಮಗ್ರಂಥದಲ್ಲಿದೆ?

ಅ: ಹಿಂದೂಗಳ ಧರ್ಮಗ್ರಂಥದಲ್ಲಿ ಇರೋದು... ಹಾ.. ಹೂ.. ಹ್ಮ್.. ಉಪನಿಷತ್ತಲ್ಲಿ..

ನಿ: ಉಪನಿಷತ್ತುಗಳು ಹಿಂದೂಗಳ ಧರ್ಮಗ್ರಂಥ ಎಂದು ಯಾರು ಹೇಳಿದ್ದು ನಿಮಗೆ? ಇರಲಿ! ಉಪನಿಷತ್ತು ಎಂಬುದರ ಅರ್ಥ ಗೊತ್ತಿದೆಯಾ ನಿಮಗೆ? ಯಾವ ಉಪನಿಷತ್ತಿನಲ್ಲಿ ಇರೋ ವಾಕ್ಯ ಇದು? ಈ ಶ್ಲೋಕದ ಅರ್ಥ ಏನು?

ಅ: ಅದೆಲ್ಲ ನಮಗೆ ಗೊತ್ತಿಲ್ಲ. ಹಿಂದೂಗಳ ಶ್ಲೋಕ ಇದು ಅಷ್ಟೆ.

ಅಂದರೆ ಸುಪ್ರೀಂ ಕೋರ್ಟ್‍ನಂಥ ದೇಶದ ಪರಮೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ ವ್ಯಕ್ತಿಗೆ ತಾನು ಯಾವುದನ್ನು ವಿರೋಧಿಸಹೊರಟಿದ್ದಾನೋ ಅದರ ಅರ್ಥ ಏನೆಂಬುದು ಗೊತ್ತಿಲ್ಲ. ಅದು ಎಲ್ಲಿ ಉಲ್ಲೇಖಗೊಂಡಿದೆ ಗೊತ್ತಿಲ್ಲ. ಅದಕ್ಕೂ ಹಿಂದೂಗಳಿಗೂ ಏನಾದರೂ ಸಂಬಂಧವಿದೆಯಾ ಎಂಬುದೂ ಸರಿಯಾಗಿ ತಿಳಿದಿಲ್ಲ. ಅರ್ಥವಿಲ್ಲದ ವ್ಯರ್ಥ ಪ್ರಲಾಪವನ್ನು ಸೃಷ್ಟಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಿಡಿದುಕೊಂಡು ಬಂದು ನ್ಯಾಯಾಲಯದ ಬಾಗಿಲು ತಟ್ಟಿದರೆ, ಅರ್ಜಿ ತಂದವನಿಗೆ ಭಾರೀ ಮೊತ್ತದ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ. ಆದಾಗ್ಯೂ ಕಿಂಚಿತ್ ಭಯವಿಲ್ಲದೆ, ಪ್ರಾಥಮಿಕ ತಯಾರಿಯನ್ನೂ ಮಾಡಿಕೊಳ್ಳದೆ ಓರ್ವ ವ್ಯಕ್ತಿ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟುತ್ತಾನೆಂದರೆ ಏನು ಹೇಳಬೇಕು? ಇದೆಲ್ಲ ಒಂದು ದೊಡ್ಡ ಕು-ವ್ಯವಸ್ಥೆಯ ಭಾಗವಾಗಿ ನಡೆಯುತ್ತಿದೆ ಎಂದೇ ಊಹಿಸಬೇಕಲ್ಲವೆ? ಇದರ ಬದಲು, ಯಾರಾದರೂ ಜನಸಾಮಾನ್ಯರು, ಅನ್ಯಕೋಮುಗಳವರ ಪ್ರಾರ್ಥನಾ ಮಂದಿರಗಳಿಂದ ಹೊರಡುವ ಅರಚಾಟಕ್ಕೆ ಸರಿಸಮನಾಗಿ ನಾವೂ ದೇವಸ್ಥಾನದ ಗೋಪುರದಿಂದ ನಾಲ್ದೆಸೆಗೆ ಕೇಳುವಂತೆ ಮೈಕ್ ಇಡುವ ವ್ಯವಸ್ಥೆ ಮಾಡುತ್ತೇವೆ; ದಿನಕ್ಕೆ ಮೂರು ಹೊತ್ತು ಭಕ್ತಿಗೀತೆ ಹಾಕುತ್ತೇವೆ ಎಂದರೆ ಕೋರ್ಟುಗಳು ಏನು ಮಾಡುತ್ತವೆ? ಅವನಿಗೆ ಛೀಮಾರಿ ಹಾಕಿ ಕಳಿಸುತ್ತವೆ. ಬೇರೆಯವರ ವಾರದ ಪ್ರಾರ್ಥನೆಯ ದಿನ ನಾವ್ಯಾಕೆ ರಜೆ ಪಡೆಯಬೇಕು? ನಮ್ಮ ಆಚರಣೆಗಳಿಗೆ ಅನುಸಾರವಾಗಿ ದೇಶದಲ್ಲಿ ಏಕಾದಶಿಯ ದಿನ ಸಾರ್ವಜನಿಕ ರಜೆ ಘೋಷಿಸಿ - ಎಂದು ಯಾರಾದರೂ ಅರ್ಜಿ ಹಿಡಿದು ಕೋರ್ಟ್ ಬಾಗಿಲು ತಟ್ಟಿದರೆ ಪರಿಣಾಮ ಏನಾಗಬಹುದು? ಅವನಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಜೀವನದಲ್ಲಿ ಮತ್ತೆಂದೂ ಅವನು ತಲೆಯೆತ್ತದಂತೆ ಮಾಡಿಬಿಡಬಹುದು! ಆದರೆ ಹಿಂದೂಗಳ ನಂಬಿಕೆ, ಆಚರಣೆ, ಜೀವನಶೈಲಿಯನ್ನು ಪ್ರಶ್ನಿಸುವ ಅರ್ಜಿಗಳೆಂದರೆ ನ್ಯಾಯಾಲಯಗಳಿಗೂ ಅದೇನೋ ಬಹಳ ಪ್ರೀತಿ. ಬಹಳ ಬೇಗ ಅವನ್ನು ಕೈಗೆತ್ತಿಕೊಳ್ಳುತ್ತವೆ. ಸದ್ಯಕ್ಕೆ ದೇಶದ ಜ್ವಲಂತ ಸಮಸ್ಯೆ ಇದೊಂದೇ ಎಂಬಂತೆ ವರ್ತಿಸುತ್ತವೆ. ಕೈಯಲ್ಲಿರುವ ಉಳಿದೆಲ್ಲ ಪ್ರಕರಣಗಳನ್ನು ಬದಿಗಿಟ್ಟು ಇದೊಂದಕ್ಕೇ ಮಹತ್ವ ಕೊಟ್ಟು ಹಗಲಿರುಳು ಚರ್ಚೆ ನಡೆಸುತ್ತವೆ. ಅಸತೋಮಾ ಸದ್ಗಮಯ ಎಂಬ ವಾಕ್ಯ ಶಾಲೆಗಳ ಪ್ರಾರ್ಥನೆಯಲ್ಲಿರಬೇಕೋ ಬೇಡವೋ ಎಂಬುದೂ ಈ ದೇಶದಲ್ಲಿ ಚರ್ಚೆಯ ವಿಷಯವಾಗುತ್ತದೆ; ಕೋರ್ಟು ಮಿಕ್ಕಿದ್ದನ್ನೆಲ್ಲ ಸೈಡಲ್ಲಿಟ್ಟು ಈ ಚರ್ಚೆಯನ್ನು ಘನಗಂಭೀರವಾಗಿ ನಡೆಸುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಇಲ್ಲ!

ಸಂಸ್ಕೃತದಲ್ಲಿ ಬರೆದಿರುವುದೆಲ್ಲ ಕಮ್ಯುನಲ್. ಅದನ್ನೆಲ್ಲ ಒಡೆದುಹಾಕಬೇಕು ಎಂದರೆ ಆ ಹಾರೆಗುದ್ದಲಿಯ ಕೆಲಸವನ್ನು ಸರ್ವೋಚ್ಚ ನ್ಯಾಯಾಲಯದ ಹೆಬ್ಬಾಗಿಲಿನಿಂದಲೇ ಪ್ರಾರಂಭಿಸಬೇಕಾಗುತ್ತದೆ! ಯಾಕೆಂದರೆ ಆ ಕಟ್ಟಡದಲ್ಲಿ ಎಲ್ಲರಿಗೆ ಕಾಣುವಂತೆ ಕೆತ್ತಿರುವ ಬರಹ: ಯತೋ ಧರ್ಮಸ್ತತೋ ಜಯಃ ಎಂದು. ಧರ್ಮಪರಿಪಾಲನೆಯಿಂದಲೇ ಜಯ ಎಂಬರ್ಥ ಕೊಡುವ ಈ ವಾಕ್ಯ, ಹಿಂದೂಗಳ ಧರ್ಮಗ್ರಂಥ ಎಂದು ಜಾತ್ಯತೀತವಾದಿಗಳು ಬೆಟ್ಟುಮಾಡಿ ತೋರಿಸುವ ಮಹಾಭಾರತದಲ್ಲಿ ಹನ್ನೊಂದು ಸಲ ಬಂದಿದೆ. ಮಹಾಭಾರತ ಹಿಂದೂಗಳದ್ದಾದರೆ ಈ ವಾಕ್ಯ ಕೋರ್ಟಿನ ಕಟ್ಟಡದ ಮೇಲೆ ಏಕಿದೆ? (ಹೌದು ಯಾಕಿದೆ, ಕಿತ್ತುಹಾಕಿ ಎಂಬ ಕೂಗು ಇನ್ನುಮುಂದೆ ಕೇಳಿಬಂದರೂ ಆಶ್ಚರ್ಯವಿಲ್ಲ!) ಕೋರ್ಟಿನಿಂದ ಆಚೆ, ನಮ್ಮ ದೇಶದ ಹೆಮ್ಮೆಯ ಸಂಸದ್ ಭವನದತ್ತ ಹೋಗೋಣ. ಅಲ್ಲಿ ಮುಖ್ಯ ಕಟ್ಟಡದ ಮೊದಲ ಲಿಫ್ಟ್ ಬಳಿ ಇರುವ ಗುಮ್ಮಟದಲ್ಲಿ ಒಳಛಾವಣಿಯ ಮೇಲೆ ಕೆತ್ತಿದ್ದಾರೆ: ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ, ವೃದ್ಧಾ ನ ತೇ ಯೇ ನ ವದಂತಿ ಧರ್ಮಮ್, ಧರ್ಮಃ ಸ ನೋ ಯತ್ರ ನ ಸತ್ಯಮಸ್ತಿ, ಸತ್ಯಂ ನ ತತ್ ಯತ್ ಛಲಮಭ್ಯುಪೈತಿ. ವೃದ್ಧರು (ಅಂದರೆ ವಯಸ್ಸಿನಲ್ಲಿ ಮುದುಕರಾದವರು ಎಂದರ್ಥವಲ್ಲ; ಜ್ಞಾನಿಗಳು, ಅನುಭವಸ್ಥರು ಎಂದರ್ಥ) ಇರದ ಸಭೆ ಸಭೆಯಲ್ಲ; ಧರ್ಮವನ್ನು ನುಡಿಯದವರು ವೃದ್ಧರೂ ಅಲ್ಲ; ಸತ್ಯದ ಆಧಾರವಿಲ್ಲದ ಮಾತು ಧರ್ಮವಲ್ಲ; ಇನ್ನೊಬ್ಬರಿಗೆ ಕೇಡುಂಟು ಮಾಡುವಂಥ ಮಾತು ಸತ್ಯವಾಗಿದ್ದರೂ ಪ್ರಯೋಜನವಿಲ್ಲ - ಎಂಬ ಅರ್ಥ ಕೊಡುವ ಮಾತು ಸಂಸತ್ತಿನಲ್ಲಿರಬಾರದು ಎಂಬ ವಾದ ಮುಂದೊಂದು ದಿನ ಬಂದರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ನಮ್ಮ ಶಿಕ್ಷಣದ ಮಟ್ಟ ಅಷ್ಟು ರಸಾತಳ ಕಂಡಿದೆ. 

ಸಂಸತ್ತಿನ ಇನ್ನೊಂದು ಕಡೆ ಛಾವಣಿಯಲ್ಲಿ ಬರೆದಿದ್ದಾರೆ: ಸಭಾ ವಾ ನ ಪ್ರವೇಷ್ಟಯಾ, ವಕ್ತವ್ಯಂ ವಾ ಸಮಂಜಸಮ್, ಅಬ್ರುವನ್ ಬಿಬ್ರುವನ್ ವಾಪಿ, ನರೋ ಭವತಿ ಕಿಲ್ಮಿಷೀ (ಸಭೆಯ ಚರ್ಚೆಗಳಲ್ಲಿ ಭಾಗವಹಿಸಬೇಕು. ಆಗ ಸತ್ಯವಾದದ್ದನ್ನೇ ನುಡಿಯಬೇಕು. ಸಭೆಯಲ್ಲಿ ಸುಳ್ಳು ಹೇಳುವ ಅಥವಾ (ಮಾತಾಡಬೇಕಾದ ಸಂದರ್ಭದಲ್ಲೂ) ಏನನ್ನೂ ಹೇಳದೆ ಮೌನವಾಗುಳಿವವನು ಪಾಪಕರ್ಮದಲ್ಲಿ ಭಾಗಿಯಾದನೆಂದೇ ಲೆಕ್ಕ). ಸ್ಮೃತಿಗ್ರಂಥ ಎಂದೊಡನೆ ಸಾಕು ಮೈ ಮೇಲೆ ಬಿಸಿನೀರು ಬಿದ್ದಂತೆ ಆಡುವ ನಮ್ಮ ದೇಶದ ಪ್ರಗತಿಪರ ಜೀವಪರ ವಿಚಾರವಾದಿಗಳು ನಾರದಸ್ಮೃತಿ ಮತ್ತು ಮನುಸ್ಮೃತಿಗಳಲ್ಲಿ ಬರುವ ಈ ಮಾತಿಗಿನ್ನೂ ವಿರೋಧ ಏಕೆ ವ್ಯಕ್ತಪಡಿಸಿಲ್ಲ? ದಿನಂಪ್ರತಿ ಮನುಸ್ಮೃತಿಯ ಪಠಣ ಮಾಡುವವರು ಇವರೇ ಅಲ್ಲವೆ? ಬಿಡಿ, ನಮ್ಮ ಮನಮೋಹನ ಸಿಂಗರಾದರೂ ಈ ವಾಕ್ಯವನ್ನು ಹತ್ತು ವರ್ಷಗಳ ಅವಧಿಯಲ್ಲಿ ಒಮ್ಮೆಯಾದರೂ ನೋಡಿ, ಕುತೂಹಲಗೊಂಡು, ಅರ್ಥ ತಿಳಿಯಲು ಯತ್ನಿಸಿದ್ದರೆ..? ಮತ್ತೇನೂ ಆಗದಿದ್ದರೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನೆಮಾ ಬರುತ್ತಿರಲಿಲ್ಲ! ಸಂಸತ್ತಿನಲ್ಲಿ ಹಾಗೇ ಅಡ್ಡಾಡುತ್ತ ಸೆಂಟ್ರಲ್ ಹಾಲ್‍ನ ಮುಂದೆ ಬಂದರೆ ಅಲ್ಲಿ ಮುಖ್ಯದ್ವಾರದ ನಾಗೊಂದಿಗೆಯ ಮೇಲೆ ಕೆತ್ತಿರುವ ಈ ಮಾತು ಗಮನ ಸೆಳೆಯುತ್ತದೆ: ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ, ಉದಾರಚರಿತಾನಾಂ ತು ವಸುಧೈವ ಕುಟುಂಬಕಂ. ಕನಿಷ್ಠಬುದ್ಧಿಯ ವ್ಯಕ್ತಿಗಳು ಎಲ್ಲದರಲ್ಲೂ ನನ್ನದು ಮತ್ತು ನನ್ನದಲ್ಲ ಎಂಬ ಭೇದವನ್ನು ಕಾಣುತ್ತಾರೆ. ಉದಾರಚರಿತರು ಮಾತ್ರ ಈ ಲೋಕವೇ ತಮ್ಮ ಕುಟುಂಬ ಎಂದು ಭಾವಿಸುತ್ತಾರೆ - ಎಂಬ ಪಂಚತಂತ್ರದ ಮಾತು ಇದು. ಸಂಸ್ಮೃತದ ಮಾತಿನ ಅರ್ಥವಾಗದ ಯಾವನಾದರೂ ಉದರಚರಿತನೊಬ್ಬ ನಾಳೆಯ ದಿನ ಈ ಮಾತನ್ನು ನೋಡಿ, ಇದು ಸಂಸ್ಮೃತದಲ್ಲಿರುವುದರಿಂದ ಹಿಂದೂಗಳಿಗೇ ಸಂಬಂಧಪಟ್ಟಿರಬೇಕೆಂದು ಗ್ರಹಿಸಿ, ಹಾರೆಪಿಕಾಸಿ ತಂದು ಸೆಂಟ್ರಲ್ ಹಾಲ್ ಒಡೆಯಲು ನಿಂತರೆ ಏನು ಮಾಡಬೇಕು? ಅವನ ಆ ಉದ್ಧಟತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿ, ವಿಧ್ವಂಸದ ಕೆಲಸವನ್ನು ನಮ್ಮ ಕೋರ್ಟುಗಳು ತಡೆಯುತ್ತವೆ ಎಂದು ನಂಬಬಹುದೆ?

ಬರಹ ಕೃಪೆ: ರೋಹಿತ್ ಚಕ್ರತೀರ್ಥ, ವಿಶ್ವವಾಣಿ ದಿನ ಪತ್ರಿಕೆ. ದಿ. ೫-೦೨-೨೦೧೯

 

 

Edited By

Ramesh

Reported By

Ramesh

Comments