ಸಾವಯವ ಕೃಷಿಕ, ನಾಡೋಜ ಡಾ. ಎಲ್. ನಾರಾಯಣರೆಡ್ಡಿ ಇನ್ನಿಲ್ಲ

14 Jan 2019 2:34 PM |
1087 Report

ನಾವು ನಮ್ಮದೇ ಭೂಮಿಯಲ್ಲಿ ದುಡಿಯುವಾಗಲೂ ಮಾಲೀಕರೆಂಬ ಹಮ್ಮಿನಲ್ಲಿ ದುಡಿಯಬಾರದು, ಈ ಭೂಮಿಯ ಸೇವಕನೆಂಬ ವಿನಯದಲ್ಲಿ ದುಡಿಯಬೇಕು ಎಂದು ವಿನಯದಿಂದ ಹೇಳುತ್ತಿದ್ದ ನಾರಾಯಣರೆಡ್ಡಿ ಇಂದು ಬೆಳಿಗ್ಗೆ ತಮ್ಮ ಪ್ರೀತಿಯ ತೋಟ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಬೆಂಗಳೂರಿನಿಂದ ಸುಮಾರು 50 ಕಿಮೀ ದೂರದ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿ ಸಮೀಪ ಅಂದಾಜು ನಾಲ್ಕು ಎಕರೆ ಜಮೀನು, ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳು, ಕಾಲಿಟ್ಟಲೆಲ್ಲಾ ಬಗೆ ಬಗೆಯ ಹಣ್ಣು ತರಕಾರಿಗಳು, ಸುತ್ತಲೂ ಹಚ್ಚ ಹಸಿರ ಸಾವಯವ ತೋಟ, ಪಕ್ಕದಲ್ಲೇ ದನ-ಕರು, ನಾಯಿ, ಕುರಿ-ಮೇಕೆ ಎಲ್ಲವನ್ನೂ ನೋಡುತ್ತಿದ್ದರೆ ಒಮ್ಮೆ ಸ್ವರ್ಗಕ್ಕೆ ಕಾಲಿಟ್ಟಂತೆ ಅನುಭವವಾಗುತ್ತದೆ ಅದು ಡಾ|| ಎಲ್. ನಾರಾಯಣರೆಡ್ಡಿಯವರ ತೋಟ. ನಾರಾಯಣರೆಡ್ಡಿ ಹುಟ್ಟಿದ್ದು 18 ಸೆಪ್ಟೆಂಬರ್ 1935, ಕೋಲಾರದ ವರ್ತೂರು ಸಮೀಪ ಸೋರಹುಣಸೆ ಎಂಬ ಗ್ರಾಮದಲ್ಲಿ. ತಂದೆ ಲಕ್ಷ್ಮಯ್ಯ ರೆಡ್ಡಿ, ತಾಯಿ ಎಲ್ಲಮ್ಮ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ನಾರಾಯಣ ರೆಡ್ಡಿಯವರು 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಕಷ್ಟ ಪಟ್ಟು, ಕೂಲಿ ನಾಲಿ ಮಾಡಿ ಬಂದ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಿ ಉಳಿದ ಹಣವನ್ನು ಕೂಡಿಟ್ಟು ದೊಡ್ಡಬಳ್ಳಾಪುರದ ಮರಳೇನಹಳ್ಳಿ ಸಮೀಪ ನಾಲ್ಕು ಎಕರೆ ಜಮೀನನ್ನು ಖರೀದಿಸುತ್ತಾರೆ.  ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿಯಿದ್ದ ನಾರಾಯಣರೆಡ್ಡಿ ಆ ಜಮೀನಿನಲ್ಲಿ ತಾವೇ ಸಾವಯವ ಕೃಷಿ ಮಾಡಲು ಮುಂದಾಗುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ.  ಸಾವಯವ ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ನಾರಾಯಣರೆಡ್ಡಿಯವರನ್ನು ಕೃಷಿ ವಿದ್ಯಾನಿಲಯವೊಂದು ಉಪನ್ಯಾಸ ನೀಡಲು ಆಹ್ವಾನಿಸಿದಾಗ "ನಾನು ಬೆಳೆಯುತ್ತಿರುವ ಕೃಷಿಯಲ್ಲಿ ಸಫಲವಾಗುವವರೆಗೆ ತೋಟದಿಂದ ಹೊರಗೆ ಬರುವುದಿಲ್ಲ" ಎಂದು ಹೇಳಿ ನಿರಾಕರಿಸಿದ್ದರಂತೆ.  ಈ ವಿಷಯವನ್ನು ನಾರಾಯಣರೆಡ್ಡಿಯವರು ಸಂದರ್ಶನದಲ್ಲಿ ತಿಳಿಸಿದ್ದರು.
ಕಾಲ ಕಳೆದಂತೆ ಪರಿಶ್ರಮದಿಂದ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನ ಮತ್ತು ಅನುಭವ ಪಡೆದ ಅವರನ್ನು ದೇಶ ವಿದೇಶಗಳ ಕೃಷಿ ವಿದ್ಯಾನಿಲಯಗಳು ಉಪನ್ಯಾಸಕ್ಕೆ ಆಹ್ವಾನಿಸಿದವು.  ತಾವು ಪಡೆದ ಜ್ಞಾನವನ್ನು ಇತರರಿಗೂ ತಿಳಿಸಿ, ಅವರನ್ನು ಮಾರ್ಗದರ್ಶಿಸಿ ಎಷ್ಟೋ ರೈತ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತರು.  ದೇಶ ವಿದೇಶಗಳ ಬಹಳಷ್ಟು ಕೃಷಿ ವಿದ್ಯಾರ್ಥಿಗಳು ಇವರಿಂದ ಸಾವಯವ ಕೃಷಿಯ ಬಗ್ಗೆ ಮಾರ್ಗದರ್ಶನ ಪಡೆದಿದ್ದಾರೆ.

ನಾಲ್ಕು ದಶಕಗಳ ಅವರ ಕೃಷಿ ಬದುಕಿನಲ್ಲಿ ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡುವುದರ ಜೊತೆಗೆ 2004 ರಲ್ಲಿ ಇವರ ಸಾಧನೆ ಗುರುತಿಸಿ ಹಂಪಿ ವಿಶ್ವವಿದ್ಯಾಲಯ "ನಾಡೋಜ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ನಾರಾಯಣರೆಡ್ಡಿಯವರು 1994 ರಲ್ಲಿ ಕರ್ನಾಟಕ ಸರ್ಕಾರದ "ರಾಜ್ಯೋತ್ಸವ ಪ್ರಶಸ್ತಿ"ಗೆ ಪಾತ್ರರಾದರು. ತಾಲ್ಲೂಕು ಕೃಷಿ ಸಾಧಕ ಪ್ರಶಸ್ತಿ, ಜಿಲ್ಲಾ ಕೃಷಿ ಸಾಧಕ ಪ್ರಶಸ್ತಿ, ರಾಜ್ಯ ಕೃಷಿ ಸಾಧಕ ಪ್ರಶಸ್ತಿ ಮತ್ತು ಡಾ|| ಆರ್. ದ್ವಾರಕಾನಾಥ್ ಶ್ರೇಷ್ಠ ಕೃಷಿಕ ಪ್ರಶಸ್ತಿಗಳೊಂದಿಗೆ ಮತ್ತಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ರೈತರಿಗೆ ಸದಾ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡುತ್ತಿದ್ದ ನಾರಾಯಣ ರೆಡ್ಡಿಯವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಕುಟುಂಬಕ್ಕೆ ದೇವರು ಆ ನೋವನ್ನು ಬರಿಸುವ ಶಕ್ತಿಯನ್ನು ನೀಡಲಿ.

ಬರಹ- ಚೇತನ್ ಕೃಷ್ಣ ✍

 

Edited By

Ramesh

Reported By

Ramesh

Comments