ಭರ್ಜರಿ ವ್ಯಾಪಾರ.....ವೈಭವಕ್ಕೆ ಮರಳಿದ ಘಾಟಿ ದನಗಳ ಜಾತ್ರೆ
ಪುರಾತನ ಪ್ರಸಿದ್ಧವಾದ ಘಾಟಿ ದನಗಳ ಜಾತ್ರೆ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಿದೆ, ಮೊದಲೆಲ್ಲಾ ವೈಭವದಿಂದ ಪ್ರತೀವರ್ಷ ರಥೋತ್ಸವಕ್ಕೆ ಮುನ್ನ ನಡೆಯುವ ದನಗಳ ಜಾತ್ರೆ ಕಳೆದ ಹತ್ತು ವರ್ಷಗಳಿಂದ ಸ್ವಲ್ಪ ಕಳೆಗುಂದಿತ್ತು, ವಾರದ ಹಿಂದೆ ಆರಂಭವಾಗಿರುವ ದನಗಳ ಜಾತ್ರೆಯಲ್ಲಿ ಸುಮಾರು ಐದುಸಾವಿರಕ್ಕಿಂತಲೂ ಹೆಚ್ಚು ದನಗಳು ಸೇರಿ ಮತ್ತೆ ತನ್ನ ವೈಭವಕ್ಕೆ ಮರಳಿದೆ ಎಂದು ಕಳೆದ ಐವತ್ತು ವರ್ಷಗಳಿಂದ ಆಂದ್ರದಿಂದ ಬರುತ್ತಿರುವ ರೈತರು ತಮ್ಮ ಖುಷಿ ವ್ಯಕ್ತಪಡಿಸಿದರು. ಪಕ್ಕದ ಅನಂತಪುರ, ಚಿತ್ತೂರು, ಕಡಪ, ಕರ್ನೂಲು ಅಲ್ಲದೆ ಹುಬ್ಬಳ್ಳಿ, ದಾವ್ಣಗೆರೆ, ಯಾದಗಿರಿ, ಮಂಡ್ಯದಿಂದಲೂ ಹೆಚ್ಚಿನ ರೈತರು ರಾಸುಗಳನ್ನು ಮಾರಾಟ ಮಾಡಲು / ಕೊಳ್ಳಲು ಆಗಮಿಸಿದ್ದರು.
ಸುಮಾರು ಮೂರು ಕಿಲೋಮೀಟರ್ ವಿಸ್ತಾರವಾಗಿ ಈ ಬಾರಿಯ ರಾಸುಗಳ ಜಾತ್ರೆಯ ಹರಡಿದೆ, ರಸ್ತೆಯ ಎರಡೂ ಬದಿಗಳಲ್ಲಿ ರೈತರು ತಮ್ಮ ಊರಿನ ಹೆಸರು, ವಂಶದ ಹೆಸರಿನಲ್ಲಿ ಶಾಮಿಯಾನ, ಮಂಟಪ ನಿರ್ಮಿಸಿ ದನಗಳನ್ನು ಅಲಂಕರಿಸಿದ್ದರು, ವಿಜಯಪುರದ ಮರವೆ ನಾರಾಯಣಪ್ಪ ಮತ್ತು ಮಕ್ಕಳು ಮಂಟಪದ ಜೊತೆ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ್ದರೆ, ದಫೇದಾರ್ ಮುನಿಶಾಮಪ್ಪ, ಬಿ.ಚನ್ನಸಂದ್ರದ ಮೂಗಣ್ಣ ಕುಟುಂಬ, ದೇವನಹಳ್ಳಿಯ ಪೈಲ್ವಾನ್ ವೆಂಕಟರಮಣಪ್ಪ, ಗಡೇನಹಳ್ಳಿ ಸಣ್ಣವೀರಪ್ಪ ಉತ್ತಮವಾಗಿ ಮಂಟಪ ನಿರ್ಮಿಸಿದ್ದರು, ಈ ಜಾತ್ರೆಯಲ್ಲಿ ಮುಖ್ಯವಾಗಿ ಹಳ್ಳಿಕಾರ್ ತಳಿಗಳದೇ ಪಾರುಪತ್ಯ, ಉಳಿದಂತೆ ಅಮೃತ ಮಹಲ್, ಮಲೆನಾಡು ಗಿಡ್ಡ ಸೇರಿದಂತೆ ದೇಸಿ ತಳಿಗಳ ಬೆಲೆ ಕನಿಷ್ಠ ಮೂವತ್ತು ಸಾವಿರದಿಂದ ಗರಿಷ್ಠ ಹತ್ತು ಲಕ್ಷದವರೆವಿಗೂ ಇದ್ದವು. ಆಡಳಿತ ಮಂಡಲಿ ಈ ಬಾರಿ ಉತ್ತಮ ಸೌಲಭ್ಯ ಒದಗಿಸಿದ್ದರು, ಕಡಿಮೆ ಚಳಿಯಿಂದಾಗಿ ರೈತರು ಖುಷಿಯಿಂದ ವ್ಯಾಪಾರ ಮಾಡುತ್ತಿದ್ದರು. ಎಂದಿನಂತೆ ಅತ್ಯುತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಆಡಳಿತ ಮಂಡಲಿ ಅಧ್ಯಕ್ಷ ಚನ್ನಪ್ಪ ಹೇಳಿದರು.
Comments