ಬಣ್ಣ ಹಚ್ಚಿ ರಂಗಕ್ಕಿಳಿದ ಅಭಿನಯ ಚತುರೆ ಉಮಾಶ್ರೀ






ಬಹುವರ್ಷಗಳ ನಂತರ ಪೌರಾಣಿಕ ನಾಟಕದಲ್ಲಿ ಖ್ಯಾತ ಪೋಷಕ ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ನಡೆಸುತ್ತಿರುವ ಮಹಿಷಾಸುರ ಮರ್ದಿನಿ ನಾಟಕ ಪ್ರದರ್ಶನದಲ್ಲಿ ಚಾಮುಂಡಿ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಪೇಕ್ಷಕರ ಮನಸೂರೆಗೊಳ್ಳುವಂತೆ ಅಭಿನಯಿಸಿದರು. ನಗರದ ರೋಜಿಪುರದಲ್ಲಿ ಮಂಗಳವಾರ ರಾತ್ರಿ ಮಹಿಷಾಸುರ ಮರ್ದಿನಿ ನಾಟಕದಲ್ಲಿ ಅಭಿನಯಿಸುವ ಮೂಲಕ ಚಿತ್ರದುರ್ಗ ಮೂಲದ ಕುಮಾರೇಶ್ವರ ನಾಟಕ ಕಂಪನಿ ಮಾಲೀಕ ಕುಮಾರಸ್ವಾಮಿ ಅವರ ಕನಸನ್ನೂ ಈಡೇರಿಸಿ ನಷ್ಟದಲ್ಲಿದ್ದ ಕಂಪನಿಗೆ ನೆರವಾದರು.
ಬಹಳ ವರ್ಷಗಳ ನಂತರ ಮಹಿಷಾಸುರ ಮರ್ಧಿನಿ ನಾಟಕದಲ್ಲಿ ಬಣ್ಣ ಹಚ್ಚಿದ್ದೇನೆ,ಅಪರೂಪಕ್ಕೆ ದೊರೆತ ಅವಕಾಶ,ವೃತ್ತಿ ರಂಗಭೂಮಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಹೊಸ ಪ್ರಯೋಗಗಳನ್ನು, ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದರು. ಹಿರಿಯ ಕಲಾವಿದೆ ಉಮಾಶ್ರೀಗೆ ನಗರದ ವಿವಿಧ ಸಂಘಟನೆಗಳಾದ ಲಯನ್ಸ್ ಕ್ಲಬ್, ತಾಲ್ಲೂಕು ಕಲಾವಿದರ ಸಂಘ, ಬೆಂ.ಗ್ರಾ.ಜಿಲ್ಲಾ ಕಲಾವಿದರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ಕರ್ನಾಟಕ ರಕ್ಷಣಾ ವೇಧಿಕೆಯ ವಿವಿಧ ಬಣಗಳು, ಜಯಕರ್ನಾಟಕ, ಕರುನಾಡ ಸೇನೆ, ಹಾಗೂ ಕರವೆ ಕನ್ನಡಿಗರ ಬಣದಿಂದ ಉಮಾಶ್ರೀ ರವರಿಗೆ ಅಭಿನಯ ಚತುರೆ ಬಿರುದನ್ನು ನೀಡಿ ಗೌರವಿಸಲಾಯಿತು.
ಡಿ.21ರಂದು ನಗರದಲ್ಲಿ ಆಯೋಜಿಸಿದ್ದ ಮಹಿಷಾಸುರ ಮರ್ದಿನಿ ನಾಟಕದ ಉದ್ಘಾಟನೆಗೆ ಬಂದಿದ್ದಾಗ, ಹಿಂದೆ ಮಹಿಷಾಸುರ ಮರ್ದಿನಿ ನಾಟಕದಲ್ಲಿ ಅಭಿನಯಿಸುತ್ತಿದ್ದುದನ್ನು ಕಲಾವಿದರ ಜತೆ ಉಮಾಶ್ರೀ ಹಂಚಿಕೊಂಡಿದ್ದರು. ಈ ವೇಳೆ ಪ್ರೇಕ್ಷಕರು ಹಾಗೂ ಕಲಾವಿದರ ಒತ್ತಾಯದ ಮೇರೆಗೆ ಪ್ರದರ್ಶನದ ಕೊನೆಯ ದಿನವಾದ ಡಿ.25ರಂದು ಚಾಮುಂಡಿ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಉಮಾಶ್ರೀ ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಮಹಿಷಾಸುರ ಮತ್ತು ಚಾಮುಂಡಿ ನಡುವಿನ ಡೈಲಾಗ್ಗಳು ಪೇಕ್ಷಕರ ಗಮನ ಸೆಳೆದವು. ಇಳಿವಯಸ್ಸಿನಲ್ಲೂ ಉಮಾಶ್ರೀಯ ರೌದ್ರನಟನೆಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಹರಿಯಿತು. ಉಮಾಶ್ರೀ ನಟನೆಯಿಂದ ನಾಟಕ ಕಂಪನಿಯ ಕಲೆಕ್ಷನ್ ಕೂಡ ಹೆಚ್ಚಾಯಿತು.
Comments