ಶ್ರೀ ಸಾಯಿ ಮಂದಿರ, ವೇಣುಗೋಪಾಲಸ್ವಾಮಿ, ತೂಬಗೆರೆ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿವಿಧ ಅಲಂಕಾರ






ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯ ಇಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನ ಎಂಬ ನಂಬಿಕೆಯೇ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದ ಹಲವಾರು ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಏರ್ಪಡಿಸಿದ್ದರು. ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರಡಿ ಸಾಯಿಮಂದಿರದಲ್ಲಿ ಬೆಳಿಗ್ಗೆ ಐದು ಘಂಟೆಯಿಂದಲೇ ಭಕ್ತಾದಿಗಳು ಉತ್ತರ ದಿಕ್ಕಿನ ವೈಕುಂಠ ಬಾಗಿಲಿನ ಮೂಲಕ ಆಗಮಿಸಿ ಸ್ವಾಮಿಯ ದರ್ಶನ ಪಡೆದರು, ಕೆರೆಬಾಗಿಲು ಬಳಿ ಇರುವ ಶ್ರೀ ನರಸಿಂಹಸ್ವಾಮಿ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಯವರಿಗೆ ಹೆಚ್.ವಿ.ವಿ. ಟ್ರಸ್ಟ್ ವತಿಯಿಂದ ವೆಂಕಟರಮಣಸ್ವಾಮಿ ಅಲಂಕಾರವನ್ನು ಹಾಗೂ ಸಂಜೆ ಆರು ಘಂಟೆಗೆ ರೋಣೂರು ಶ್ರೀ ಈವೆಂಟ್ಸ್ ರವರಿಂದ ಭಕ್ತಿಗೀತೆಗಳ ವಾಧ್ಯಗೋಷ್ಟಿ ಏರ್ಪಡಿಸಲಾಗಿತ್ತು. ತಾಲ್ಲೂಕಿನ ತೂಬಗೆರೆಯಲ್ಲಿರುವ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯವರಿಗೆ ನವಧಾನ್ಯದ ಅಲಂಕಾರ, ಆಂಜನೇಯಸ್ವಾಮಿಗೆ ಹೂವಿನ ಅಲಂಕಾರ ಮಾಡಿ, ವೈಕುಂಠ ದ್ವಾರ ನಿರ್ಮಿಸಿದ್ದರು, ಬಂದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯನ್ನು ದೇವಸ್ಥಾನದ ವತಿಯಿಂದ ಏರ್ಪಡಿಸಿದ್ದರು
ವೈಕುಂಠ ಏಕಾದಶಿಯ ಬಗ್ಗೆ ಕಥೆಯೊಂದು ಹೀಗಿದೆ: ಭಾಗವತೋತ್ತಮನಾದ ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು. ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು. ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ.
Comments