ಇಂದು ವೈಕುಂಠ ಏಕಾದಶಿ...ತರೆದ ವೈಕುಂಠದ ಬಾಗಿಲು







ವೈಕುಂಠ ಏಕಾದಶಿ ಪ್ರಯುಕ್ತ ಇಂದು ದೊಡ್ಡಬಳ್ಳಾಪುರ ನಗರದ ತೇರಿನಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕ್ಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠದ್ವಾರ ತೆರೆಯಲಾಗಿತ್ತು, ಬೆಳಿಗಿನ ಜಾವ ಮೂರುವರೆಗೆ ಶ್ರೀ ವೆಂಕಟೇಶ್ವವರಸ್ವಾಮಿಯವರಿಗೆ ಅಭಿಷೇಕ, ಮತ್ತು ಅಲಂಕಾರ ಮಾಡಿ ನಾಲ್ಕೂ ಮುಕ್ಕಾಲು ಘಂಟೆಗೆ ಭಕ್ತರನ್ನು ಸ್ವಾಮಿಯವರ ದರ್ಶನ ಪಡೆಯಲು ಬಿಡಲಾಯಿತು. ಮುಂಜಾನೆಯಿಂದಲೇ ದೇವಾಲಯದಲ್ಲಿ ಸರತಿ ಸಾಲು, ವೆಂಕಟೇಶ್ವರನ ದರ್ಶನ ಪಡೆದ ಭಕ್ತರು ಪುನೀತರಾಗಿ ಹೊರಕ್ಕೆ ಬರುತ್ತಿದ್ದರು. ಶ್ರೀ ಚೌದೇಶ್ವರಿದೇವಿ ಮಹಿಳಾ ದೇವಾಂಗ ಸಂಘದ ಸದಸ್ಯರು ಬೆಳಿಗ್ಗೆ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಷ್ಣು ಪಾರಾಯಣ ಮಾಡಿದರು.
ಒಂದು ವರ್ಷದಲ್ಲಿ ಇಪ್ಪತ್ತನಾಲ್ಕು ಏಕಾದಶಿಗಳು ಬರುತ್ತದೆ, ಅದರಲ್ಲಿ ಸೂರ್ಯದೇವನು ಉತ್ತರಾಯಣಕ್ಕೆ ಹೋಗುವ ಮೊದಲು ಧನುರ್ಮಾಸದಲ್ಲಿ ಬರುವ ಶುದ್ಧ ಏಕಾದಶಿಯನ್ನು ವೈಕುಂಠ ಏಕಾದಶಿ ಅಥವ ಮುಕ್ಕೋಟಿ ಏಕಾದಶಿ ಎಂದು ಕರೆಯುತ್ತಾರೆ, ಸೂರ್ಯನು ಧನುರ್ಮಾಸದಲ್ಲಿ ಪ್ರವೇಶಿಸಿದ ನಂತರ ಮಕರಸಂಕ್ರಮಣದವರೆಗಿನ ಕಾಲ ಮದ್ಯದಲ್ಲಿ ಬರುವುದೇ ವೈಕುಂಠ ಏಕಾದಶಿ, ಈ ದಿನದಂದು ವೈಕುಂಠದ ಬಾಗಿಲು ತೆರೆಯುತ್ತದೆ ಎಂದು ಭಕ್ತರು ಬೆಳಗಿನ ಜಾವಕ್ಕೇ ವೈಷ್ಣವ ದೇವಾಲಯಗಳಲ್ಲಿ ಉತ್ತರದ ಬಾಗಿಲಿನ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ, ಧನುರ್ಮಾಸದ ಶುಕ್ಲ ಪಕ್ಷ ಏಕಾದಶಿಯಂದು ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ ದ್ವಾರ ತೆರೆಯುವ ದಿನ ಎಂಬ ನಂಬಿಕೆಯೇ ಹಬ್ಬದ ಆಚರಣೆ ಹಿನ್ನೆಲೆ.
ವೈಕುಂಠ ಏಕದಶಿಯಂದು ಉತ್ತರ ದ್ವಾರದ ಮೂಲಕವೇ ಭಗವಂತನನ್ನು ಏಕೆ ದರ್ಶಿಸಬೇಕು? ಅದರ ಹಿನ್ನಲೆಯಲ್ಲಿ ಇರುವ ಸಂದೇಶವಾದರೂ ಏನು? ಸ್ಥೂಲವಾಗಿ ಯೋಚಿಸಿ. ಉತ್ತರಾಯಣದ ಮುನ್ನ ಕಾಲವೇ ಸಂಕ್ರಮಣ. ದಕ್ಷಿಣ ದಿಕ್ಕಿಗೆ ಕರ್ಮ ಸ್ಥಾನ ಎನ್ನುವ ಮಾತಿದೆ. ‘ತಮಸೋಮಾ ಜ್ಯೋತಿರ್ಗಮಯ' ಎನ್ನುವ ಉಪನಿಷತ್ ವಾಕ್ಯದಂತೆ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಸಮಯವೇ ಉತ್ತರಾಯಣ. ಮನೆಗೊಂದು ಬಾಗಿಲಿರುವಂತೆ ಉತ್ತರಾಯಣದ ದ್ವಾರವೇ ವೈಕುಂಠ ಏಕಾದಶಿ! ಏಕಾದಶಿ ಆಚರಣೆಯ ನೆವದಲ್ಲಿ ಜಿಹ್ವಾ ಚಾಪಲ್ಯಕ್ಕೆ, ಉತ್ತರದ್ವಾರದಲ್ಲಿ ತಲೆ ತಗ್ಗಿಸುವ ನೆವದಲ್ಲಿ ಮನಸ್ಸಿನ ಅಹಂಕಾರಕ್ಕೆ ಒಂದಿಷ್ಟು ಬ್ರೇಕ್ ಹಾಕುತ್ತೇವೆ. ಅಂತಹ ಭಾವನೆಯಲ್ಲಿ ನಡೆದಾಗ ಮಾತ್ರವೇ ವೈಕುಂಠ ಏಕಾದಶಿ ಆಚರಣೆಯಲ್ಲಿ ಒಂದಷ್ಟು ಸಾರ್ಥಕತೆ ಕಂಡೀತು. ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ್ದು ಕೂಡಾ ಈ ದಿನವೆ ಎಂದು ಹೇಳುತ್ತಾರೆ.
Comments