ಡಿಸೆಂಬರ್ 8 ರಂದು ದೊಡ್ಡಬಳ್ಳಾಪುರಕ್ಕೆ ಮುಖ್ಯಮಂತ್ರಿ ಭೇಟಿ, ರೈತರ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ

06 Dec 2018 7:44 AM |
2234 Report

ರಾಜ್ಯ ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ರೈತರಿಗೆ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ನಂತರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮನ್ನಾ ಮಾಡಿ ರೈತರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರ್ಹ ಸಾಲಗಾರ ರೈತರನ್ನು ಮಾತ್ರ ಗುರುತಿಸಿ ದಾಖಲೆಗಳನ್ನು ಪಡೆಯುವ ಸಲುವಾಗಿ ರಾಜ್ಯದ ದೊಡ್ಡಬಳ್ಳಾಪುರ ಹಾಗೂ ಬೀದರ ಜಿಲ್ಲೆಯ ಸೇಡಂ ತಾಲ್ಲೂಕುಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಡಿ.8ರಂದು ಸಾಲಮನ್ನಾ ಪ್ರಕ್ರಿಯೆಗೆ ದೊಡ್ಡಬಳ್ಳಾಪುರದಲ್ಲಿ ಚಾಲನೆ ಸಿಗಲಿದ್ದು ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ. ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಅಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ಜಿಲ್ಲೆಯಲ್ಲಿ ಒಟ್ಟು 27,247 ರೈತರ ಸಾಲಮನ್ನಾ ಆಗಲಿದೆ. ಈಗಾಗಲೇ ಮಾಹಿತಿ ಕ್ರೋಡೀಕರಣ ಕಾರ್ಯ ನಡೆದು ಜಿಲ್ಲೆಯ ಎಲ್ಲಾ ರೈತರ ಮಾಹಿತಿ ಜಿಲ್ಲಾಡಳಿತದ ಕೈ ಸೇರಿದೆ. ಇನ್ನೆರಡು ದಿನದಲ್ಲಿ ಮಾಹಿತಿ ಪರಿಶೀಲನೆ ಕಾರ್ಯ ಮುಕ್ತಾಯಗೊಂಡರೆ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಕೇವಲ ದೊಡ್ಡಬಳ್ಳಾಪುರ ತಾಲೂಕಿನ ರೈತರ ಜತೆಗೆ ಇಡೀ ಜಿಲ್ಲೆಯ ರೈತರ ಸಾಲದ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುವ ಮೂಲಕ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಕಾರಿ ಸಂಘ, ಸೇವಾ ಸಹಾಕರಿ ಸಂಘ, ಪಿಎಲ್‌ಡಿ ಬ್ಯಾಂಕ್‌ ಸೇರಿದಂತೆ ನಾನಾ ಸಹಕಾರಿ ಸಂಘಗಳಲ್ಲಿ 17,493 ರೈತರು ಸಾಲ ಪಡೆದಿದ್ದಾರೆ.  ಈಗಾಗಲೇ ಇವರೆಲ್ಲರ ಮಾಹಿತಿ ಕ್ರೋಡೀಕರಿಸಿ ಮೂರು ಹಂತದಲ್ಲಿ ಪರಿಶೀಲನೆ ನಡೆಸಲಾಗಿದೆ. ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ 9854 ರೈತರು ಸಾಲ ಪಡೆದಿದ್ದು ಅವರ ಮಾಹಿತಿ ಸಂಗ್ರಹ ಕಾರ್ಯ ಚುರುಕಿನಿಂದ ಸಾಗುತ್ತಿದೆ.

ಗುರುವಾರ ಮಾಹಿತಿ ಪರಿಶೀಲನೆ ಕಾರ್ಯ ನಡೆಯಲಿದೆ.  ಶನಿವಾರದ ವೇಳೆಗೆ ಪರಿಶೀಲನೆ ಮುಕ್ತಾಯವಾದರೆ ಜಿಲ್ಲೆಯ 27 ಸಾವಿರ ರೈತರ ಸಾಲಮನ್ನಾ ಆಗಲಿದೆ.  ಆದರೆ ಎಷ್ಟು ಮೊತ್ತ ಮನ್ನಾ ಆಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.  ರಾಜ್ಯದ ಪ್ರತಿ ರೈತರ ತಲಾ 2 ಲಕ್ಷ ರೂ. ಸಾಲಮನ್ನಾ ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಪ್ರಕ್ರಿಯೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದಲೇ ಚಾಲನೆ ನೀಡಲಾಗುತ್ತಿದೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸಾಲಮನ್ನಾ ಯೋಜನೆಗೆ ದೊಡ್ಡಬಳ್ಳಾಪುರದಿಂದಲೇ ಚಾಲನೆ ನೀಡಲು ಆಗಮಿಸುತ್ತಿದ್ದಾರೆ, ಆದರೆ ರೈತರ ಸಾಲದಲ್ಲಿ ಎಷ್ಟು ಮನ್ನಾ ಮಾಡಲಾಗಿದೆ ಎನ್ನುವ ಮಾಹಿತಿ ಕೂಡ ಶನಿವಾರವೇ ಹೊರಬೀಳಲಿದೆ. ಜೆಡಿಎಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೊಡ್ಡಬಳ್ಳಾಪುರ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ವಿ.ಎಸ್.ರವಿಕುಮಾರ್ ಕೋರಿದ್ದಾರೆ.

Edited By

Ramesh

Reported By

Ramesh

Comments