ಪ್ರೀತಿ ನಿರಾಕರಣೆ....ಮಚ್ಚಿನಿಂದ ಕೊಚ್ಚಿ ಅಪ್ರಾಪ್ತ ಬಾಲಕಿಯ ಕೊಲೆ






ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಅಪ್ರಾಪ್ತ ಬಾಲಕಿಯನ್ನು ಮಚ್ಚಿನಿಂದ ಕೊಚ್ಚಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ಸುಮಾರು 8-50ಕ್ಕೆ ದೊಡ್ಡಬಳ್ಳಾಪುರದ ಎರಡನೇ ವಾರ್ಡ್ ಗಂಗಾಧರನಗರದಲ್ಲಿ ನಡೆದಿದೆ. ಬಸವೇಶ್ವರನಗರದ ನಿವಾಸಿ ಗಾರೆಕೆಲಸದ ಗೋವಿಂದಪ್ಪ ಲಲಿತಮ್ಮ ದಂಪತಿಗಳ ಎರಡನೇ ಮಗಳು ಕೀರ್ತನಾ(16) ಮೃತ ದುರ್ದೈವಿ. ಆರೋಪಿ ನವೀನ್[28] ಮೃತ ಹುಡುಗಿಯ ಭಾವನ ಅಣ್ಣನಾಗಿದ್ದು, ಈತನಿಂದಲೇ ಕೃತ್ಯ ನಡೆದಿದೆ. ಸ್ಥಳೀಯ ಬಿ.ಎಸ್.ಎ. ಹೈಸ್ಕೂಲ್ ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಕೀರ್ತನಾ ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಗಂಗಾಧರಪುರ ಬಳಿ ಮಚ್ಚಿನಿಂದ ಹತ್ಯೆಗೈದು ಪರಾರಿಯಾಗಿ ಸರ್ಕಾರಿ ಆಸ್ಪತ್ರೆಯ ಹತ್ತಿರ ತಾನೂ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿಕೊಂಡು ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ತನ್ನನ್ನು ಪ್ರೀತಿಸುವಂತೆ ಆರೋಪಿ ನವೀನ್ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಹಿಂದೆ ಎರಡು ಬಾರಿ ಹುಡುಗಿಯ ಪೋಷಕರು ಆತನಿಗೆ ಬುದ್ಧಿವಾದ ಹೇಳಿದ್ದರಂತೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕೃತ್ಯವನ್ನು ಗಂಗಾಧರ ನಗರ ವಾರ್ಡ್ ನಗರಸಭಾ ಸದಸ್ಯ ಆರ್.ಕೆಂಪರಾಜು ಖಂಡಿಸಿ, ಹತ್ಯೆ ಮಾಡಿದ ನವೀನನಿಗೆ ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
Comments