ಅನಂತಕುಮಾರ್ ನೆನಪಲ್ಲಿ ಭಾವುಕರಾಗಿ ಕಣ್ಣೀರಾದ ಹನುಮಂತರಾಯಪ್ಪ
ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಹನ್ನೊಂದು ಘಂಟೆಗೆ ಏರ್ಪಡಿಸಲಾಗಿತ್ತು, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಶ್ರದ್ಧಾಂಜಲಿ ಸಲ್ಲಿಸುವಾಗ ತಮ್ಮ ಮತ್ತು ಅನಂತಕುಮಾರ್ ನಡುವೆ ಇದ್ದ ಬಾಂಧವ್ಯ ನೆನೆದು ಭಾವುಕರಾಗಿ, ಮಾತು ತಡವರಿಸುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡರು. ನನಗಿಂತ ಚಿಕ್ಕವರು ಯಾರೇ ಸತ್ತರೂ ನೋವಾಗುತ್ತೆ, ದೆಹಲಿಯಲ್ಲಿದ್ದಾಗ ಅವರ ಬಿಡುವಿನ ವೇಳೆಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು, ಪ್ರಮೋದ್ ಮಹಾಜನ್ ಜಾಗ ತುಂಬಿದ ವ್ಯಕ್ತಿ.
ಅನೇಕ ಬಾರಿ ದೊಡ್ಡಬಳ್ಳಾಪುರದ ನೇಕಾರರನ್ನು ತಂಡೋಪ ತಂಡವಾಗಿ ದೆಹಲಿಗೆ ಕರೆದುಕೊಂಡು ಹೋಗಿದ್ದೆ, ಆಗೆಲ್ಲಾ ಎಷ್ಟು ಜನರಿದ್ದರೂ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಸಂಘಟನೆ ವಿಷಯದಲ್ಲಿ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ಮಾತು ಹೇಳುತ್ತಿದ್ದರು, ಎಂದೂ ಯಾರೂ ದೂರದ ವ್ಯಕ್ತಿಯಾಗಿ, ಹಿರಿಯರು ಕಿರಿಯರನ್ನ ಒಂದುಗೂಡಿಸಿ ಪಕ್ಷ ಕಟ್ಟಲು ಬಹಳಷ್ಟು ಕೆಲಸ ಮಾಡಿದ ವ್ಯಕ್ತಿ ಎಂದು ತಮ್ಮ ಅನಂತ್ ಒಡನಾಟ ನೆನಪಿನ ಬುತ್ತಿ ಬಿಚ್ಚಿಟ್ಟರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ ಮಾತನಾಡಿ ಅನಂತ್ ತಾಯಿ ಗಿರಿಜಾ ಶಾಸ್ತ್ರಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚ ಘಟಕ ಸ್ಥಾಪನೆ ಹಿಂದಿನ ಪ್ರೇರಣೆ, ರೂವಾರಿಯಾಗಿದ್ದರು ಹಾಗೂ ಪತ್ನಿ ಡಾ.ತೇಜಸ್ವಿನಿ ಅಧಮ್ಯ ಚೇತನಾ ಸಂಸ್ಥೆಯ ಮುಖಾಂತರ ಪ್ರತಿದಿನ ಎರಡು ಲಕ್ಷ ಮಕ್ಕಳಿಗೆ ಮಧ್ಯಾನ್ಹದ ಊಟ ಒದಗಿಸುತ್ತಿದ್ದಾರೆ, ಜೊತೆಗೆ ಆರೋಗ್ಯ, ವಿದ್ಯೆ ಮತ್ತು ಗಿಡನೆಟ್ಟು ಹಸಿರು ಕ್ರಾಂತಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಂ.ಪಿ.ನಾಗರಾಜ್ ಮಾತನಾಡಿ ಅನಂತ್ ಕರ್ನಾಟಕದ ಆಸ್ತಿಯಲ್ಲ ಇಡೀ ಭಾರತದ ಆಸ್ತಿ, 1996 ಮುಂಚೆ ಅವರ ಜೊತೆಯಲ್ಲಿ ಸಂಘಟನೆ ಮಾಡಿದ್ದನ್ನ ನೆನಪಿಸಿಕೊಂಡರು, ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಶುರುಮಾಡಿದ, ಆದರೆ ಪಕ್ಷದಲ್ಲಿ ಅನಂತ್ ಬೆಳೆದ ರೀತಿ ಅಸಾಮಾನ್ಯ, ನಾವು ಅವರನ್ನು ಆದರ್ಶವಾಗಿ ಸ್ವೀಕರಿಸಬೇಕು, ಕೇಂದ್ರದಲ್ಲಿ ಹತ್ತು ಖಾತೆ ನಿರ್ವಹಣೆ ಮಾಡಿದ ಏಕೈಕ ವ್ಯಕ್ತಿ, ಎಲ್ಲೂ ಕಪ್ಪು ಚುಕ್ಕೆ ಇಲ್ಲ, ಇವರ ಅಗಲಿಕೆ ಬಿಜೆಪಿಗೆ ತುಂಬಲಾರದ ನಷ್ಟ ಎಂದು ಹೇಳಿದರು. ನಾರಾಯಣಶರ್ಮ, ಜೋನಾ ಮಲ್ಲಿಕಾರ್ಜುನ, ಬೆಂಗಳೂರು ಗ್ರಾ.ಜಿಲ್ಲಾ ಅಧ್ಯಕ್ಷ ರಾಜಣ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ರಾಮಕೃಷ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖಂಡರಾದ ಸತ್ಯನಾರಾಯಣ ಗೌಡ, ತಾ.ಅಧ್ಯಕ್ಷ ನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ನಗರಸಭಾ ಸದಸ್ಯ ಬಿ.ಕೆ.ಮುದ್ದಪ್ಪ, ವಕೀಲರಾದ ಇಂದಿರಾ, ಜಿ.ಟಿ.ರವಿಕುಮಾರ್, ವಕ್ತಾರ ಅಶ್ವಥ್ ನಾರಾಯಣ್, ನಗರ ಅಧ್ಯಕ್ಷ ರಂಗರಾಜು, ಅಮರ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ಶ್ರೀನಿವಾಸ್, ವೆಂಕಟೇಶ್ ಬಂತಿ, ಉಮಾ ಮಹೇಶ್ವರಿ, ಲೀಲಾ ಮಹೇಶ್, ನಗರ ಮಹಿಳಾ ಅಧ್ಯಕ್ಷೆ ಗಿರಿಜ, ವಾಣಿ, ವತ್ಸಲ ಮತ್ತಿತರರು ಹಾಜರಿದ್ದರು
Comments