ಬೆಟ್ಟದ ಬಿರಿಯಾನಿ @ 6 AM....
ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಾನ್ವೆಜ್ ಪ್ರೀಯರಂತೂ ನಾಲಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬಿರಿಯಾನಿ ಅಂದ್ರೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಬಲು ಪ್ರೀಯವಾದ ಆಹಾರ, ನೀವು ಎಷ್ಟೇಲ್ಲಾ ವೆರೈಟಿ ಬಿರಿಯಾನಿ ತಿಂದಿರಬಹುದು. ಹೈದರಾಬಾದಿ ಬಿರಿಯಾನಿ, ಮೊಘಲೈ ಬಿರಿಯಾನಿ, ದೊನ್ನೆ ಬಿರಿಯಾನಿ, ಆದ್ರೆ ಯಾವತ್ತಾದ್ರೂ 'ಅಪ್ಪಟ ಕರ್ನಾಟಕ ಶೈಲಿ' ಯಲ್ಲಿ ಮಾಡಿರುವ ನಾಟಿ ಸ್ಟೈಲ್ ಬಿರಿಯಾನಿ ತಿಂದಿದ್ದೀರಾ? ನಾನಾ ರೀತಿಯ ಬಿರಿಯಾನಿ ಸವಿದಿರುತ್ತೀರಿ, ಆದ್ರೆ ನಂದಿ ಬೆಟ್ಟದ ಹತ್ತಿರ ದೊರೆಯುವ ಬಿರಿಯಾನಿ ಬಗ್ಗೆ ಕೇಳಿದ್ದೀರಾ? ಇಲ್ಲ ತಿಂದಿದ್ದೀರಾ? ಈ ಬಿರಿಯಾನಿಯ ಹೆಸರೇ ಒಂಥರಾ ವಿಚಿತ್ರವಾಗಿದೆ... ಬೆಟ್ಟದ ಬಿರಿಯಾನಿ!
ವೀಕೆಂಡ್ ಸ್ಪಾಟ್ ನಂದಿಬೆಟ್ಟ ಬೆಂಗಳೂರಿಗರ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಸಾಕಷ್ಟು ಜನ ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು ಇಲ್ಲಿ ಸೂರ್ಯಾಸ್ತ ಹಾಗೂ ಸೂರ್ಯೋದಯವನ್ನು ನೋಡಲು ಬರುತ್ತಾರೆ. ಇದೀಗ ನಂದಿಬೆಟ್ಟಕ್ಕೆ ಒಬ್ಬಬ್ಬರೇ ಹೋಗೋದನ್ನು ಬ್ಯಾನ್ ಮಾಡಿದ್ದಾರೆ ಅದು ಬೇರೆ ವಿಷ್ಯ ಬಿಡಿ. ಆದ್ರೆ ಫ್ರೆಂಡ್ಸ್ ಗ್ಯಾಂಗ್ ಜೊತೆ ಕಾಲಕಳೆಯಲು ಹೋಗುವವರಿಗೆ ಯಾವುದೇ ನಿರ್ಬಂಧವಿಲ್ಲ. ಇನ್ನು ವೀಕೆಂಡ್‌ನಲ್ಲಿ ಫ್ರೆಂಡ್ಸ್ ಜೊತೆ ಬೈಕ್ ರೈಡ್‌ನಲ್ಲಿ ನಂದಿಹಿಲ್ಸ್‌ಗೆ ಹೋಗೋದಂದ್ರೆ ಒಂಥರಾ ಮಜಾ. ಭಾನುವಾರಗಳಂದು ಮುಂಜಾನೆ ನಂದಿಬೆಟ್ಟಕ್ಕೆ ಹೋಗುವವರಿಗೆ ಈ ಬೆಟ್ಟದ ಬಿರಿಯಾನಿ ಬೆಳಿಗ್ಗೆಯೇ ಟೇಸ್ಟ್ ಮಾಡೋ ಅವಕಾಶ ಸಿಗುತ್ತದೆ. ಈ ಬೆಟ್ಟದ ಬಿರಿಯಾನಿಯು ನಂದಿಬೆಟ್ಟಕ್ಕೆ ಹೋಗುವ ದಾರಿ ಮದ್ಯ ಮೌಂಟ್ palazzo ಹೋಟೆಲ್ ಎದುರು ಇದೆ, ನೀವು ಗೂಗಲ್ ಮ್ಯಾಪ್ಸ್ ನಲ್ಲಿ bettad biryani ಅಂತ ಟೈಪ್ ಮಾಡಿದರೆ ಅದೇ ದಾರಿ ತೋರಿಸುತ್ತೆ.. . ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರ ಹೊಟ್ಟೆ ತುಂಬಿಸೋಕೆ ಒಳ್ಳೆಯ ಜಾಗ ಇದಾಗಿದೆ. ಈ ಬಿರಿಯಾನಿ ಅಡ್ಡದ ವಿಶೇಷ ಅಂದ್ರೆ ಇದು ನಿಮಗೆ ಪ್ರತಿದಿನ ಸಿಗೋದಿಲ್ಲ. ಬದಲಾಗಿ ಬರೀ ಭಾನುವಾರದಂದು ಸಿಗುತ್ತದೆ. ಉಳಿದ ಸಮಯದಲ್ಲಿ ನೀವಲ್ಲಿಗೆ ಹೋದ್ರೆ ಬರೀ ಬೆಟ್ಟವನ್ನು ನೋಡಿಕೊಂಡು ಬರಬೇಕಷ್ಟೇ.
ಬಿರಿಯಾನಿ ಮಿಸ್ ಆಗಲ್ಲ! ಎಂಜಿನೀರಿಂಗ್ ಮುಗಿಸಿರೋ ಹುಡುಗರ ಗುಂಪೊಂದು ನೀವು ಬೆಳಗ್ಗಿನ ಸೂರ್ಯೋದಯವನ್ನಾದ್ರೂ ಮಿಸ್ ಮಾಡಬಹುದು ಆದ್ರೆ ನಮ್ಮ ಬಿರಿಯಾನಿಯನ್ನು ಮಿಸ್ ಮಾಡಲು ಸಾಧ್ಯವಿಲ್ಲ! ಎನ್ನುವ ಅಡಿಬರಹದಲ್ಲಿ ಬಿರಿಯಾನಿ ಬಡಿಸುತ್ತಿದ್ದಾರೆ. ಈ ಬಿರಿಯಾನಿಯ ಇನ್ನೊಂದು ವಿಶೇಷ ಅಂದ್ರೆ ಇದು ಇತರ ಬಿರಿಯಾನಿ ಹೋಟೆಲ್‌ಗಳಂತೆ ಇಡೀ ದಿನ ಓಪನ್ ಇರೋದಿಲ್ಲ. ಬರೀ ಭಾನುವಾರದಂದು ಬೆಳಗ್ಗಿನ ಹೊತ್ತಿನಲ್ಲಷ್ಟೇ ಓಪನ್ ಇರುತ್ತದೆ. ಅದೂ ಕೂಡಾ ಬೆಳಗ್ಗೆ 6 ಗಂಟೆಗೆ ತೆರೆದರೆ ಮಧ್ಯಾಹ್ನ 12 ಗಂಟೆಗೆ ಮುಚ್ಚುತ್ತದೆ. ನಿಮಗೆ ಬಿರಿಯಾನಿ ಬೇಕಂದ್ರೆ ಅಷ್ಟರೊಳಗೆ ಹೋಗಬೇಕು. ಬೆಟ್ಟದ ಬಿರಿಯಾನಿ ಒಂದು ಪ್ಲೇಟ್‌ಗೆ ಕೇವಲ 80 ರೂ. ರುಚಿನೂ ಚೆನ್ನಾಗಿದೆ. ನಂದಿ ಬೆಟ್ಟ ಹತ್ತಿ ಇಳಿದು ಸುಸ್ತಾಗಿರುವ ದೇಹಕ್ಕೆ, ಹಸಿದ ಹೊಟ್ಟೆಗೆ ಬಿರಿಯಾನಿ ಬೀಳುವಾಗ ನಿಮ್ಮ ಆಯಾಸವೆಲ್ಲಾ ದೂರವಾಗುತ್ತದೆ. ಹೆಚ್ಚಾಗಿ ನಂದಿಬೆಟ್ಟದ ಸುತ್ತಮುತ್ತ ಎಲ್ಲೂ ಹೊಟ್ಟೆ ತುಂಬಿಸಿಕೊಳ್ಳುವಂತಹ ಜಾಗ ಕಾಣಿಸೋದೇ ಇಲ್ಲ. ಅದ್ರಲ್ಲೂ ನಾನ್ ವೆಜ್ ಹೋಟೆಲ್‌ಗಳು ಇಲ್ಲವೇ ಇಲ್ಲ. ಕೆಫೆ ತರಹ ರೆಸ್ಟೋರೆಂಟ್ ಗಳಲ್ಲಿ ಊಟದ ಬೆಲೆ ಬೆಟ್ಟಕ್ಕಿಂತ ಮೇಲಿರುತ್ತದೆ. ಬೆಟ್ಟದ ಬಿರಿಯಾನಿ ಹೋಟೆಲ್ ನಲ್ಲಿ ಕೇವಲ 80 ರೂಪಾಯಿಗಳಿಗೆ ಹೊಟ್ಟೆ ತುಂಬುವಷ್ಟು ಬಿರಿಯಾನಿ ಸಿಗುವುದು.
ಭಾನುವಾರ ಬೆಳಂಬೆಳಗ್ಗೆ ಯಾರು ಈ ಬಿರಿಯಾನಿ ತಿಂತಾರೇ ಅಂತ ನಿಮಗನಿಸಬಹುದು ಆದ್ರೆ ಅದುವೇ ಇಲ್ಲಿನ ವಿಶೇಷ. ಭಾನುವಾರ ಬೆಳಿಗ್ಗೆ ಬೆಟ್ಟದ ಬಿರಿಯಾನಿ ಎಂಥವರನ್ನಾದ್ರೂ ತನ್ನತ್ತ ಸೆಳೆಯುತ್ತದೆ. ನಂದಿಬೆಟ್ಟಕ್ಕೆ ಭೇಟಿ ನೀಡುವವರು ಹೆಚ್ಚಿನವರು ಮುಂಜಾನೆಯ ಸಮಯದಲ್ಲೇ ಭೇಟಿ ನೀಡುತ್ತಾರೆ. ಹಾಗಾಗಿ ಮುಂಜಾನೆ ನಂದಿಬೆಟ್ಟಕ್ಕೆ ಭೇಟಿ ನೀಡುವವರು ಈ ಬಿರಿಯಾನಿಯನ್ನು ಸವಿಯೋದು ಮರೆಯಬೇಡಿ,
ಚಿತ್ರ ಬರಹ: ರಜತ
Comments