ಶ್ರೀ ಆದಿನಾರಾಯಣಸ್ವಾಮಿ ದೇವಾಲಯ ನವೀಕರಣ ಸಮಿತಿ ರಚನೆ






ಇಂದು ಬೆಳಿಗ್ಗೆ ಎಂಟು ಘಂಟೆಗೆ ಗಾಂಧಿನಗರದಲ್ಲಿರುವ ಶ್ರೀ ಆದಿನಾರಾಯಣಸ್ವಾಮಿ ದೇವಾಲಯ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶ್ರೀ ಆದಿನರಾಯಣಸ್ವಾಮಿ ದೇವಾಲಯ ನವೀಕರಣ ಸಮಿತಿ ರಚನೆ ಮಾಡಲಾಯಿತು, ಜಿಲ್ಲಾಧಿಕಾರಿ ಕರೀಗೌಡ ಮಾರ್ಗದರ್ಶನದಲ್ಲಿ ಈ ಸಮಿತಿಯು ಕಾರ್ಯ ನಿರ್ವಹಿಸಲಿದ್ದು, ಗಾಂಧಿನಗರದಲ್ಲಿರುವ ಆದಿನಾರಾಯಣಸ್ವಾಮಿ ದ್ವಾರಬಾಗಿಲಿನ ನವೀಕರಣದ ಜೊತೆಯಲ್ಲಿ ಅದಕ್ಕೆ ಹೊಂದಿಕೊಂಡಂತೆ ಗರ್ಭಗುಡಿಯನ್ನೂ ನಿರ್ಮಿಸಿ ನಗರದ ಪ್ರಸನ್ನ ವೆಂಕಟರಮಣ ದೇವಸ್ಥಾನದಲ್ಲಿರುವ ಶ್ರೀ ಆದಿನಾರಾಯಣಸ್ವಾಮಿಯವರ ಮೂಲ ವಿಗ್ರಹವನ್ನು ಪುನಃ ಪ್ರತಿಷ್ಠಾಪಿಸಲು ತೀರ್ಮಾನಿಸಲಾಯಿತು.
ಶ್ರೀ ಆದಿನಾರಾಯಣಸ್ವಾಮಿ ದೇವಾಲಯ ದ್ವಾರ ಬಾಗಿಲಿನ ನವೀಕರಣಗೊಳಿಸಿ ಅದನ್ನು ಸ್ಮಾರಕವನ್ನಾಗಿ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡಲು ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯರ ಸಭೆ ಕರೆಯಲಾಗಿತ್ತು, ಸಭೆಗೆ ಆಗಮಿಸಿದ್ದ ಸ್ಥಳೀಯರಾದ ಕೇಶವ ದ್ವಾರ ಬಾಗಿಲಿನ ಇತಿಹಾಸ ತಿಳಿಸಿದರು, ದ್ವಾರ ಬಾಗಿಲಿನ ಪಕ್ಕದಲ್ಲೇ ವಾಸವಾಗಿರುವ ಅಮಾವಾಸ್ಯೆ ಶಿವಕುಮಾರ್ ತಮ್ಮಲ್ಲಿದ್ದ ಹಳೆಯ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ತೋರಿಸಿ ಮತ್ತಷ್ಟು ಮಾಹಿತಿಯನ್ನು ನೀಡಿದರು. ಇತಿಹಾಸಕಾರ ಡಾ.ಎಸ್. ವೆಂಕಟೇಶ್ ಮಾತನಾಡಿ ದೊಡ್ಡಬಳ್ಳಾಪುರದ ಪಾಳೇಗಾರರಿಂದ ನಿರ್ಮಾಣವಾದ ಹಳೆಯ ಪಳೆಯುಳಿಕೆ ಈ ಮಂಟಪವಾಗಿದ್ದು, ಇದನ್ನು ಮಲ್ಲಬೈರೇಗೌಡ ವಿಜಯನಗರದ ಆಶ್ರಿತರಾಜನಾಗಿದ್ದಾಗ ಅಂದಿನ ವಿಜಯನಗರ ಶೈಲಿಯಲ್ಲಿಯೇ ದೇವಾಲಯ ನಿರ್ಮಿಸಲಾಗಿದ್ದು, ಸದ್ಯಕ್ಕೆ ಉಳಿದಿರುವ ಈ ಮಂಟಪವನ್ನಾದರೂ ಸ್ಮಾರಕವನ್ನಾಗಿಸಿ ಉಳಿಸಿಕೊಳ್ಳಬೇಕು, ಇಂದಿಗೂ ತೇರಿನಬೀದಿಯಲ್ಲಿರುವ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ದೇವಸ್ಥಾನದ ಮೂಲ ವಿಗ್ರಹ ಇದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಕರೀಗೌಡ ಈ ಮಂಟಪದ ಇತಿಹಾಸ ಕೇಳಿ ಮತ್ತು ಅದಕ್ಕೆ ಸಂಭಂದಪಟ್ಟ ಫೋಟೋ ನೋಡಿ ಸಂತೋಷವಾಯಿತು, ದ್ವಾರ ಬಾಗಿಲಿನ ಜೊತೆಗೆ ಗರ್ಭಗುಡಿಯನ್ನೂ ನಿರ್ಮಿಸಿ ವ್ಯಾಸರಾಯರಿಂದ ಸ್ಥಾಪಿಸಲಟ್ಟ ಮೂಲ ವಿಗ್ರಹವನ್ನೇ ತಂದು ಇಲ್ಲಿಯೇ ಪುನರ್ ಪ್ರತಿಷ್ಠಾಪನೆ ಮಾಡುವ, ಇದಕ್ಕೆ ನಗರದ ನಾಗರೀಕರೇ ಸಂಪೂರ್ಣವಾಗಿ ಸಹಕಾರ ನೀಡಬೇಕು, ಸರ್ಕಾರದಿಂದ ಯಾವುದೇ ರೀತಿಯ ನೆರವು ಬರುವುದಿಲ್ಲ, ಅದಕ್ಕೆ ಅರ್ಜಿ ಸಲ್ಲಿಸಿ ಕಾಯುವುದರಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ, ಇಲ್ಲಿ ನೆರೆದಿರುವ ನೀವುಗಳೇ ನಿಂತು ಈ ಕಾರ್ಯವನ್ನು ಪೂರ್ಣಗೊಳಿಸಿ ನಾನೂ ನಿಮ್ಮ ಜೊತೆ ಕೈಗೂಡಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಆದಿನಾರಾಯಣಸ್ವಾಮಿ ದೇವಾಲಯ ನವೀಕರಣ ಸಮಿತಿಗೆ ಈ ಕೆಳಕಂಡ ಹನ್ನೊಂದು ಮಂದಿಯ ತಂಡವನ್ನು ರಚಿಸಿ, ಇವರಿಗೆ ಇದರ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಯಿತು. ಎ.ಎಸ್. ಕೇಶವ, ಡಿ.ಎಲ್.ಶ್ರೀನಿವಾಸಮೂರ್ತಿ, ಬಿ.ಜಿ.ಶ್ರೀನಿವಾಸ್, ಡಿ.ಆಂಜಿನಪ್ಪ, ಸುಚೇತನ ಟ್ರಸ್ಟ್ ಚೇರ್ಮನ್ ಮಂಜುನಾಥ್, ಅಧ್ಯಕ್ಷ ಸುನಿಲ್ ಗೌಡ, ಅಮಾವಾಸ್ಯೆ ಶಿವಶಂಕರ್, ಎ.ವೆಂಕಟೇಶ್, ಚಂಪಾಲಾಲ್, ಮಾನು ಮತ್ತು ಗಾಂಧಿನಗರ ವಾರ್ಡಿನ ನಗರಸಭಾ ಸದಸ್ಯ ಎಂ.ಶಿವಕುಮಾರ್.
ಸಭೆಯಲ್ಲಿ ಸಾಹಿತಿ ಎಂ.ಜಿ.ಚಂದ್ರಶೇಕರ್, ಪಿ.ಸಿ.ವಿ. ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ಹಿರಿಯ ಪತ್ರಕರ್ತ ರಾಜಶೇಕರ ಶೆಟ್ಟಿ, ಸುಚೇತನ ಟ್ರಸ್ಟ್ ಚೇರ್ಮನ್ ಮಂಜುನಾಥ್, ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ನವೀನ್, ಖಜಾಂಚಿ ಅನಿಲ್, ಟ್ರಸ್ಟೀಗಳಾದ ಶ್ರೀನಿಧಿ, ಲೋಕೇಶ್, ಶರಣ್, ಭರತ್, ಪ್ರದೀಪ್, ಹೋಟೆಲ್ ಕೃಷ್ಣಮೂರ್ತಿ, ಜಿ.ಡಿ.ಲಕ್ಷ್ಮೀನಾರಾಯಣ್, ಮತ್ತಿತರರು ಹಾಜರಿದ್ದರು.
Comments