ಹಾಸನಾಂಬೆ ದರ್ಶನ ನವೆಂಬರ್ 1 ರಿಂದ 9 ರ ವರೆಗೆ
ಹಾಸನ ಜಿಲ್ಲೆ ಅಧಿದೇವತೆ ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನ ಭಾಗ್ಯ ಭಕ್ತರಿಗೆ ನವೆಂಬರ್ 1 ಗುರುವಾರದಿಂದ ಆರಂಭಗೊಳ್ಳಲಿದೆ, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿಯಲ್ಲಿ ಸಪ್ತಮಾತೃಕೆಯರನ್ನು ಕಾಣಬಹುದು. ಪ್ರತಿ ಸಂವತ್ಸರದ ಅಶ್ವಯುಜ ಮಾಸದ ಹುಣ್ಣಿಮೆಯ ನಂತರದ ಗುರುವಾರ ದೇವಿಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ. ಈ ವರ್ಷ ಒಂಬತ್ತು ದಿನಗಳ ಕಾಲ ದರ್ಶನದ ಅವಕಾಶ ಸಿಗಲಿದೆ, ದೇವಿಯ ಮೈಮೇಲೆ ಮುಡಿಸಿದ್ದ ಹೂವು ಹಾಗೂ ಗರ್ಭಗುಡಿಯಲ್ಲಿ ಹಚ್ಚಲಾಗಿರುವ ದೀಪದ ಜ್ಯೋತಿ, ದೇವಿಗಾಗಿ ಇಟ್ಟಿರುವ ನೈವೇದ್ಯವನ್ನು ಕಾಣಲು ಭಕ್ತರು ಕಾತುರದಿಂದ ನಗರಕ್ಕೆ ಆಗಮಿಸುತ್ತಾರೆ.
ಕೃಷ್ಣಪ್ಪ ನಾಯಕ ಎಂಬ ಪಾಳೇಗಾರ 12ನೇ ಶತಮಾನದಲ್ಲಿ ನಿರ್ಮಿಸಿದ ದೇವಸ್ಥಾನದಲ್ಲಿ ಮುಂಜಾನೆ ಅರಸು ವಂಶಸ್ಥರು ಬನ್ನಿಮರ ಕಡಿಯುವ ಮೂಲಕ ಪೂಜೆ ಸಲ್ಲಿಸಿದ ನಂತರ ಹಾಸನಾಂಬೆಯ ಗರ್ಭಗುಡಿಯನ್ನು ತೆರೆಯಲಾಗುತ್ತದೆ, ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಸಂಪ್ರದಾಯ. ಮೊದಲನೆಯ ದಿನ ಅಮ್ಮನವರಿಗೆ ಯಾವುದೇ ರೀತಿಯ ಆಭರಣ, ವಸ್ತ್ರಗಳ ವಿನ್ಯಾಸವಿರುವುದಿಲ್ಲ. ಭಕ್ತರಿಗೆ ಮುಕ್ತ ಧರ್ಮ ದರ್ಶನಕ್ಕೆ ಅವಕಾಶವಿರುತ್ತದೆ. ಎರಡನೆಯ ದಿನದಿಂದ ದೇವಿಯ ಆಭರಣ ವಸ್ತಗಳನ್ನು ಜಿಲ್ಲಾ ಖಜಾನೆ(ಟ್ರೆಜರಿ)ಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ನಂತರ ವಿಜೃಂಭಣೆಯಿಂದ ಪೂಜೆ ಹಾಗೂ ನೈವೇದ್ಯ ಅರ್ಪಿಸಲಾಗುವುದು. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಿಂದ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುವರು.
ಸಪ್ತಮಾತೃಕೆ ಹಾಸನಾಂಬೆ ದೀಪಾವಳಿ ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಸಪ್ತಮಾತೃಕೆಯರ ಹುಟ್ಟಿನ ಗುಟ್ಟು ಇದೆ. ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಶಿವ ಬ್ರಹ್ಮನ ವರದಿಂದ ಉನ್ಮತ್ತನಾದ ಅಂಧಕಾಸುರನ ವಧೆಗೆ ಸಿದ್ಧನಾಗುತ್ತಾನೆ. ನೆಲಕ್ಕೆ ಬೀಳುವ ಅಂಧಕಾಸುರನ ರಕ್ತದ ಪ್ರತಿ ಹನಿಯಿಂದಲೂ ಇನ್ನೊಬ್ಬ ಅಂಧಕಾಸುರನು ಹುಟ್ಟುತ್ತಿರಲು, ಅವನ ರಕ್ತ ನೆಲಕ್ಕೆ ಬೀಳುವುದನ್ನು ತಡೆಯುವ ಸಲುವಾಗಿ ತನ್ನ ಬಾಯಿಯಿಂದ ಶಿವನು ಒಬ್ಬ ಶಕ್ತಿಯನ್ನು (ಯೋಗೇಶ್ವರಿ) ಸೃಷ್ಟಿಸಿದ. ತರ ದೇವತೆಗಳು ಶಿವನ ಸಹಾಯಕ ತಮ್ಮ ಶಕ್ತಿಯನ್ನು ಕಳುಹಿಸಿದರು. ಹೀಗೆ ಜನ್ಮತಾಳಿದವರೇ ಸಪ್ತಮಾತೃಕೆಯರು . ಈ ಸಪ್ತಮಾತೃಕೆಯರಲ್ಲಿ ಹಾಸನಾಂಬ ದೇವಿಯೂ ಒಬ್ಬಳಾಗಿದ್ದಾಳೆ. ದೇವಾಲಯದ ಸುತ್ತ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿ ಭಕ್ತರು ಸರತಿಯ ಸಾಲಿನಲ್ಲಿ ಬಂದು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ನೀರಿನ ವ್ಯವಸ್ಥೆ ರಾತ್ರಿ ಭಕ್ತರು ಉಳಿಯಲು ವ್ಯವಸ್ಥೆ ಮಾಡಲಾಗಿದೆ.
ಸುದ್ದಿ ಮೂಲ: ದ್ಯಾವನೂರು ಮಂಜುನಾಥ್
Comments