ಹದಿನಾರು ಕಣ್ಣಿನ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
ದಿನಾಂಕ 12-10-2018 ಶುಕ್ರವಾರ ಬೆಳಿಗ್ಗೆ 6 ಘಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಹದಿನಾರು ಕಣ್ಣಿನ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿರುವ ಹಳೆಯದಾದ ನೀರಿನ ಟ್ಯಾಂಕ್ ಪರಿಶೀಲನೆ ನಡೆಸಿ ಅದನ್ನು ಸುರಕ್ಷಿತವಾಗಿ ಕೆಡವಲು ಅಧಿಕಾರಿಗಳಿಗೆ ಆದೇಶ ನೀಡಿದರು, ಹೇಮಾವತಿಪೇಟೆ, ಬಸ್ ನಿಲ್ದಾಣದಲ್ಲಿ ಸುತ್ತಾಡಿ ಕಸದ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ನೂತನವಾಗಿ ನಿರ್ಮಿಸುತ್ತಿರುವ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮರಗಳನ್ನು ಕಡಿಯದೆ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಸುಚೇತನಾ ಟ್ರಸ್ಟ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಕರೀಗೌಡ ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಛೇರಿ ಆರಂಭವಾಗಲಿದೆ, ಅಷ್ಟರೊಳಗೆ ನಗರವನ್ನು ಶುಚಿಯಾಗಿಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ, ಈ ಕಾರ್ಯಕ್ಕೆ ಊರಿನ ನಾಗರೀಕರೂ ಸಹಕರಿಸುವಂತೆ ಕೋರಿದರು. ಜಿಲ್ಲಾಧಿಕಾರಿಗಳ ಜೊತೆಯಲ್ಲಿ ತಹಸೀಲ್ದಾರ್ ಬಿ.ಎ.ಮೋಹನ್. ಪೌರಾಯುಕ್ತ ಮಂಜುನಾಥ್, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಕೆ.ರಮೇಶ್, ನಗರಸಭಾ ಸದಸ್ಯರಾದ ಎಸ್.ಎ.ಭಾಸ್ಕರ್, ಎಂ.ಶಿವಕುಮಾರ್, ಡಿ.ಎಂ.ಚಂದ್ರಶೇಕರ್, ಮಲ್ಲೇಶ್, ಬಿ.ಕೆ.ಮುದ್ದಪ್ಪ, ನಗರಸಭೆ ಅಧಿಕಾರಿಗಳು, ಬಸ್ ನಿಲ್ದಾಣದ ವ್ಯಾಪಾರಸ್ಥರು, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Comments