ಬಿಬಿಎಂಪಿ ನೂತನ ಮೇಯರ್ ಪಟ್ಟ ಇವರಿಗೆ ಬಹುತೇಕ ಖಚಿತ..!!

ಕಳೆದ ಎರಡು ವಾರಗಳಿಂದ ಬಿಬಿಎಂಪಿ ಮೇಯರ್ ಗಾದಿಗಾಗಿ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಂತಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಪಟ್ಟ ಜಯನಗರ ವಾರ್ಡ್ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಒಲಿಯುವುದು ಬಹುತೇಕ ಖಚಿತವಾಗಿದೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಮೂಲಕ ತಮ್ಮ ಸಾಮರ್ಥ್ಯವನ್ನು ಪಕ್ಷದ ಒಳಗೆ ಹಾಗೂ ಹೊರಗಿನ ಎದುರಾಳಿಗೆ ಪ್ರದರ್ಶಿಸಿದ್ದಾರೆ. ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ. ಸೆ.28ರಂದು ಬೆಳಗ್ಗೆ 8ರಿಂದ 9.30ರ ವರೆಗೆ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ. ಬಿಬಿಎಂಪಿ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. 11.30ರ ನಂತರ ಮತದಾರರ ಹಾಜರಾತಿ ಪ್ರಕ್ರಿಯೆ ಆರಂಭವಾಗುತ್ತದೆ. ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ನಡೆದಿದೆ, ರಾಮಲಿಂಗಾರೆಡ್ಡಿ, ಎನ್‌ಎ ಹ್ಯಾರಿಸ್, ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರನ್ನು ಪ್ರತ್ಯೇಕ ಮಾತುಕತೆಗೆ ದಿನೇಶ್ ಗುಂಡೂರಾವ್ ಕರೆದೊಯ್ದಿದ್ದಾರೆ. ಇನ್ನೊಂದೆಡೆ ನೀವೇ ನಿರ್ಧರಿಸಿ, ಕಾರ್ಪೊರೇಟರ್ ಗಳ ಅಭಿಪ್ರಾಯ ಸಂಗ್ರಹಿಸಿ ಎಂದು ಹೇಳಿ ಸಿದ್ದರಾಮಯ್ಯ ಹೊರಟಿದ್ದಾರೆ. ಶುಕ್ರವಾರ ಮೊದಲಿಗೆ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದವರ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಬಳಿಕ ಪರ, ವಿರೋಧದ ಬಗ್ಗೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಮಾಡಲಾಗುತ್ತದೆ. ಮಧ್ಯಾಹ್ನ 1 ಗಂಟೆಯೊಳಗೆ ನಗರಕ್ಕೆ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ.
Comments