ದೇವೇಗೌಡರು ಮಾಡಿರುವ ಈ ತಂತ್ರಕ್ಕೆ ಬಿಜೆಪಿ ಪಾಳಯವನ್ನೇ ನಡುಗಿ ಹೋಗಿದೆ...! ಅಷ್ಟಕ್ಕೂ ದೇವೆಗೌಡರ ಪ್ಲಾನ್ ಏನ್ ಗೊತ್ತಾ?

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಮಾಡಿದ ಒಂದು ತಂತ್ರಜ್ಞಾನಕ್ಕೆ ಅಲುಗಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸ್ಥಿರವಾಗುವಂತೆ ಮಾಡಿದೆ.
ಈ ಬೆಳವಣಿಗೆಗಳ ಹಿಂದಿರುವುದು ಕಾಂಗ್ರೆಸ್ ನಾಯಕರೇ ಎಂಬುದು ಸ್ಪಷ್ಟವಾದ ಮೇಲೆ ದೇವೇಗೌಡರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದರು. "ರಾಹುಲ್ ಜೀ, ನಾವು ಜಾತ್ಯತೀತ ಶಕ್ತಿಗಳು ಒಗ್ಗೂಡಲಿ. ಮುಂದಿನ ದಿನಗಳಲ್ಲಿ ನೀವು ಪ್ರಧಾನಿಯಾಗಲು ದಾರಿ ಮಾಡಿಕೊಡಲಿ ಎಂದು ಕಾಂಗ್ರೆಸ್ ಜತೆ ಕೈ ಜೋಡಿಸಿ ಕರ್ನಾಟಕದಲ್ಲಿ ಸರ್ಕಾರ ರಚಿಸಿದೆವು. ಆದರೆ ನಿಮ್ಮ ಪಕ್ಷದ ನಾಯಕರೇ ನಮ್ಮನ್ನು ಮುಗಿಸಲು ಹೊರಟಿದ್ದಾರೆ. ಹೀಗಾಗಿ ಒಂದು ಕೆಲಸ ಮಾಡೋಣ. ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿ ಬಿಡೋಣ" ಎಂದರು.
ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಂಗಾಲಾಗಿದ್ದು ಅಸಹಜವೇನಲ್ಲ. ಯಾಕೆಂದರೆ ಒಂದು ಪಕ್ಷ ಸ್ವಯಂಬಲದ ಮೇಲೆ ಸರ್ಕಾರ ರಚಿಸಿದ್ದರೆ, ಮತ್ತದು ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿ, ವಿಧಾನಸಭೆಯನ್ನು ವಿಸರ್ಜಿಸುವ ತೀರ್ಮಾನಕ್ಕೆ ಬಂದರೆ ರಾಜ್ಯಪಾಲರು ಅದನ್ನು ಜಾರಿಗೆ ತರುವುದು ಅನಿವಾರ್ಯ. ಆದರೆ ಇಲ್ಲಿರುವುದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ. ಹೀಗಾಗಿ ವಿಧಾನಸಭೆಯನ್ನು ವಿಸರ್ಜಿಸುವುದಾಗಿ ಸಚಿವ ಸಂಪುಟ ನಿರ್ಣಯ ಕೈಗೊಂಡರೂ ರಾಜ್ಯಪಾಲರು ಅದನ್ನು ಇಂಪ್ಲಿಮೆಂಟ್ ಮಾಡಬೇಕು ಎಂದೇನಿಲ್ಲ.
ಮೊದಲನೆಯ ಬೆಳವಣಿಗೆ ನಡೆದರೆ ಯಡಿಯೂರಪ್ಪ ನೇತೃತ್ವದಲ್ಲಿ ಅಲ್ಪಮತದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು. ಮತ್ತದನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಕೂಡಾ ಹಿಂಜರಿಯುತ್ತದೆ. ಯಾಕೆಂದರೆ ಬಹುಮತಕ್ಕೆ ಹಾಜರಾಗಿ ಎಂದು ವಿಪ್ ಜಾರಿಗೊಳಿಸಿದರೆ ಶಾಸಕರನೇಕರು ರಾಜೀನಾಮೆ ನೀಡಿ ಕೈ ಪಾಳೆಯವೇ ಛಿದ್ರವಾಗಬಹುದು. ಹೀಗಾಗಿ ಪಕ್ಷ ಛಿದ್ರವಾಗುವುದಕ್ಕಿಂತ ಬಹುಮತ ಯಾಚನೆಯ ಸಂದರ್ಭದಲ್ಲಿ ಶಾಸಕರು ಗೈರು ಹಾಜರಾದರೂ ನೋಡಿಕೊಂಡು ಮೌನವಾಗಿರಲು ಕಾಂಗ್ರೆಸ್ ನಿರ್ಧರಿಸುವುದು ಅನಿವಾರ್ಯ. ಆದರೆ ಈ ರೀತಿ ಬಿಜೆಪಿ ಅಲ್ಪಮತದ ಸರ್ಕಾರ ರಚಿಸಿದರೆ ಹಾನಿಯಾಗುವುದು ಕಾಂಗ್ರೆಸ್ ಪಕ್ಷಕ್ಕೇ ವಿನಃ ಜೆಡಿಎಸ್ ಆಗಲ್ಲ.
ಯಾಕೆಂದರೆ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳಲ್ಲಿ ಕುಮಾರಸ್ವಾಮಿ ಸರ್ಕಾರ ರೈತರ, ಬಡವರ ಪರವಾಗಿ ಹಲ ನಿರ್ಣಯಗಳನ್ನು ಕೈಗೊಂಡಿದೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಅದರ ಪವರ್ ಸ್ವಲ್ಪ ಮಟ್ಟಿಗಾದರೂ ಹೆಚ್ಚಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಸ್ಥಿತಿ ಹಾಗಿಲ್ಲ. ಯಾಕೆಂದರೆ ವಿಧಾನಸಭೆ ಚುನಾವಣೆ ನಡೆಯುವ ಕಾಲದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಹೀಗಾಗಿ ಪಕ್ಷವನ್ನು ಮುನ್ನಡೆಸುವ ಶಸ್ತ್ರಾಸ್ತ್ರಗಳೂ ಅವರ ಕೈಲಿದ್ದವು. ಆದರೆ ಈಗ ರಾಜ್ಯ ಕಾಂಗ್ರೆಸ್ ಒಡೆದ ಮನೆ. ಅಲ್ಲೀಗ ಸಿದ್ದರಾಮಯ್ಯ ಅವರ ಪಾಳೆಯದ ವಿರುದ್ದ ಡಿಸಿಎಂ ಡಾ. ಜಿ ಪರಮೇಶ್ವರ, ಐಟಿ ಮತ್ತು ಇಡಿ ದಾಳಿಗೆ ತುತ್ತಾಗಿರುವ ಡಿಕೆ ಶಿವಕುಮಾರ್, ಸಂಪುಟದಲ್ಲಿ ಸ್ಥಾನ ಸಿಗದೆ ವಿಲಿವಿಲಿ ಒದ್ದಾಡುತ್ತಿರುವ ಎಂ.ಬಿ. ಪಾಟೀಲ ಸೇರಿದಂತೆ ಹಲ ನಾಯಕರು ಇರುವ ಪಾಳೆಯ ರೆಡಿಯಾಗಿ ಕುಳಿತಿದೆ. ಹೀಗಾಗಿ ಈ ಪಾಳೆಯಗಳು ಪರಸ್ಪರ ಬಡಿದಾಟಕ್ಕಿಳಿದರೂ ಸಾಕು, ಅದರ ಹಾನಿ ಕಾಂಗ್ರೆಸ್ ಪಕ್ಷಕ್ಕಾಗುತ್ತದೆ.
ಒಂದು ಬೆಳವಣಿಗೆ ಹೀಗೆ ನಡೆಯಬಹುದಾದರೆ, ಮತ್ತೊಂದು ಬೆಳವಣಿಗೆ ಹೀಗೂ ನಡೆಯಬಹುದು. ತಾವು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಜೆಡಿಎಸ್ ಹೇಳಿದರೂ, ಅಥವಾ ಕಾಂಗ್ರೆಸ್ ಹೇಳಿದರೂ ರಾಜ್ಯಪಾಲ ವಾಜೂಭಾಯಿ ವಾಲಾ ಅವರು ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ. ಹೀಗೆ ವಿಧಾನಸಭೆಯನ್ನು ಅಮಾನತಿನಲ್ಲಿಡುವ ಮೂಲಕ, ಸರ್ಕಾರ ರಚಿಸಲು ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿಯನ್ನೇ ಆಹ್ವಾನಿಸುತ್ತಾರೆ. ಹೀಗೆ ಮಾಡಿದರೂ ಕಷ್ಟ ಕಾಂಗ್ರೆಸ್ ಪಕ್ಷಕ್ಕೇ ಹೊರತು ಜೆಡಿಎಸ್ ಗಲ್ಲ. ಯಾಕೆಂದರೆ ಹೀಗೆ ತನಗೆ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟ ಜೆಡಿಎಸ್ ಬಗ್ಗೆ ಬಿಜೆಪಿಯ ನಾಯಕರಿಗಿರುವ ವಿಶ್ವಾಸ ಹೆಚ್ಚಾಗುತ್ತದೆಯೇ ಹೊರತು, ಅದನ್ನು ನಿರ್ನಾಮ ಮಾಡಬೇಕು ಎಂಬ ಕಾಂಕ್ಷೆ ಹುಟ್ಟುವುದಿಲ್ಲ.
ಯಾಕೆಂದರೆ ಅಂತಿಮವಾಗಿ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡುವ ಗುರಿ ಇದೆಯೇ ಹೊರತು ಜೆಡಿಎಸ್ ಪಕ್ಷವನ್ನಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ವರ್ಸಸ್ ದೇವೇಗೌಡ ಫ್ಯಾಮಿಲಿ ಎಂಬ ಸ್ಟೋರಿ ಇರಬಹುದು. ಆದರೆ ಮೇಲ್ಮಟ್ಟದಲ್ಲಿ ದೇವೇಗೌಡ ವಿಥ್ ನರೇಂದ್ರ ಮೋದಿ ಸ್ಟೋರಿ ಇನ್ನೂ ಜೀವಂತವಾಗಿಯೇ ಇದೆ. ಈ ಎಲ್ಲ ಅಂಶಗಳು ರಾಹುಲ್ ಗಾಂಧಿ ಅವರಿಗೆ ಗೊತ್ತು. ಹೀಗಾಗಿ ಅವರು, "ಬೇಡ ದೇವೇಗೌಡಾಜಿ, ನೀವು ಹಿರಿಯರು. ಮುಂದಿನ ಸಂಸತ್ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟದ ವಿರುದ್ದ ಜಾತ್ಯತೀತ ಶಕ್ತಿಗಳು ಗೆಲ್ಲಬೇಕೆಂದರೆ ನಿಮ್ಮ ಆಶೀರ್ವಾದವೂ ಇರಬೇಕು" ಎಂದು ಬಿಟ್ಟರು. ಅಷ್ಟೇ ಅಲ್ಲ, ಈ ಹೊತ್ತಿಗಾಗಲೇ ಕುಮಾರಸ್ವಾಮಿ ಸರ್ಕಾರವನ್ನು ಅಲುಗಾಡಿಸುತ್ತಿದ್ದ ಶಕ್ತಿಗಳ ಜತೆ ಮಾತನಾಡಿ, 5 ವರ್ಷಗಳ ಕಾಲ ನೀವು ಅಧಿಕಾರದಿಂದ ಅಲುಗಾಡದಂತೆ ಮಾಡಿದ್ದೆ. ಅದಕ್ಕಾದರೂ ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನಿಮ್ಮ ಪ್ರತಿಷ್ಠೆ, ನಿಮಗೇ ಅಧಿಕಾರ ನೀಡಿದ್ದ ಪಕ್ಷದ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡುತ್ತದೆ ಎಂದು ಮನ ಕಲಕುವಂತೆ ವಿವರಿಸಿದರು. ಅಲ್ಲಿಗೆ ಸತತವಾಗಿ ಅಲುಗಾಡುತ್ತಿದ್ದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಏಕಾಏಕಿ ಸ್ಥಿರವಾಯಿತು. ಅಂದ ಹಾಗೆ ರಾಜಕೀಯದಲ್ಲಿ ಸ್ಥಿರತೆ ಎಂಬುದು ಶಾಶ್ವತವೇನಲ್ಲ. ಆದರೆ ದೇವೇಗೌಡರ ಚಾಣಾಕ್ಷ ನಡೆ ಸರ್ಕಾರಕ್ಕೆ ತಾತ್ಕಾಲಿಕ ಸ್ಥಿರತೆಯನ್ನಾದರೂ ತಂದುಕೊಟ್ಟಿದ್ದು ನಿಜ.
Comments