ಸಹಕಾರಿ ಬ್ಯಾಂಕ್ ಸಾಲಮನ್ನಾ ಕುರಿತು ಹೊಸ ಆದೇಶ ಹೊರಡಿಸಿದ ರಾಜ್ಯ ಸರ್ಕಾರ..! ರೈತರು ತಿಳಿಯಲೇಬೇಕಾದ ಮುಖ್ಯ ವಿಷಯ..!!

25 Sep 2018 9:35 AM |
6296 Report

ಸಹಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದಲ್ಲಿ ಸಾಲ ಮನ್ನಾ ಅನ್ವಯವಾಗುವುದಿಲ್ಲ ಎಂಬ ಆದೇಶವನ್ನು ರಾಜ್ಯ ಸರ್ಕಾರವು ಮರು ಮಾರ್ಪಾಡುಗೊಳಿಸಿ ಠೇವಣಿ ಮೊತ್ತದ ಕುರಿತ ಉಲ್ಲೇಖವನ್ನು ಕೈ ಬಿಟ್ಟು ಹೊಸ ಆದೇಶ ಹೊರಡಿಸಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಹಣ ಠೇವಣಿ ಇಟ್ಟಿದ್ದರೂ ಆ ಠೇವಣಿಯನ್ನು ಸಾಲಕ್ಕೆ ಜಮಾ ಮಾಡುವುದಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳಲ್ಲಿನ ರೈತರ 1 ಲಕ್ಷ ರು.ವರೆಗಿನ ಬೆಳೆ ಸಾಲಮನ್ನಾ ಯೋಜನೆಯಡಿ ವಿಧಿಸಿದ್ದ ಷರತ್ತುಗಳನ್ನು ತಿದ್ದುಪಡಿ ಮಾಡಲಾಗಿದೆ. ಬ್ಯಾಂಕ್‌ನಲ್ಲಿ ರೈತರು ಠೇವಣಿ ಇಟ್ಟಿದ್ದರೂ ಸಾಲ ಮನ್ನಾದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಠೇವಣಿ ಮೊತ್ತವನ್ನು ಕಳೆದು ಉಳಿದ ಮೊತ್ತವನ್ನು ಸಾಲಮನ್ನಾ ಯೋಜನೆಗೆ ಸೇರಿಸಬೇಕು ಎಂಬ ಷರತ್ತುಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದರು. ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ರವಾನಿಸಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಲಮನ್ನಾ ಮೊತ್ತವನ್ನು ಪಾವತಿಸಲಾಗಿದೆ. ಸಾಲ ಮನ್ನಾಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಕ್ಲೇಮ್ ಮಾಡಲು ಬ್ಯಾಂಕ್‌ಗಳು ಸರ್ಕಾರಕ್ಕೆ ಸಲ್ಲಿಸಬೇಕು. ಅ.5 ರೊಳಗೆ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ.

ಕಳೆದ ಜು.10 ರವರೆಗಿನ ಎಲ್ಲಾ ಬೆಳೆ ಸಾಲವನ್ನು 1 ಲಕ್ಷ ರು.ವರೆಗೆ ಸಾಲಮನ್ನಾ ಮಾಡಲಿದೆ ಎಂದರು. ರೈತರ ಉಳಿತಾಯ ಖಾತೆಗೆ ಸಾಲಮನ್ನಾದ ಹಣ ಜಮೆಯಾಗಲಿದೆ. ವೇತನದಾರರು, ಪಿಂಚಣಿದಾರರು, ಆದಾಯತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣೆ ಪತ್ರ ಪಡೆದು ಸಾಲಮನ್ನಾ ಯೋಜನೆ ಜಾರಿಗೊಳಿಸಲಾಗುವುದು. ಸಹಕಾರಿ ಸಂಘಗಳ ಸಾಲ ಮೊತ್ತ ಕ್ಲೈಮ್ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಹಕಾರ ಸಂಸ್ಥೆಗಳ 9498 ಕೋಟಿ ರು. ಸಾಲಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಜುಲೈ, ಆಗಸ್ಟ್ ತಿಂಗಳ ಸಾಲ ಮನ್ನಾವು 312 ಕೋಟಿ ರು. ಇದ್ದು, ಸೆಪ್ಟೆಂಬರ್ ತಿಂಗಳಲ್ಲಿ 236 ಕೋಟಿ ರು. ಆಗಲಿದೆ. ಅಕ್ಟೋಬರ್ ತಿಂಗಳಲ್ಲಿ 203 ಕೋಟಿ ರು., ಫೆಬ್ರವರಿಯಲ್ಲಿ 1100 ಕೋಟಿ ರು., ಮಾರ್ಚ್‌ನಲ್ಲಿ ಎರಡು ಸಾವಿರ ಕೋಟಿ ರು. ಮೇ ತಿಂಗಳಲ್ಲಿ 1700 ಕೋಟಿ ರು. ಜೂನ್ ತಿಂಗಳಲ್ಲಿ 1500 ಕೋಟಿ ರು. ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ. 2019 ರ ಜುಲೈ ವೇಳೆಗೆ ಸಹಕಾರಿ ಸಂಸ್ಥೆಗಳ ಸಂಪೂರ್ಣ ಸಾಲಮನ್ನಾವಾಗಲಿದೆ ಎಂದು ಸಚಿವರು ತಿಳಿಸಿದರು. ಸಾಲಮನ್ನಾಕ್ಕೆ ಸಂಬಂಧಪಟ್ಟಂತೆ ರೈತರಿಗೆ ಸಾಲ ಋಣ ಮುಕ್ತ ಪ್ರಮಾಣ ಪತ್ರ ನೀಡಲಾಗುವುದು. ದಸರಾ, ದೀಪಾವಳಿ ವೇಳೆಗೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಪ್ರಮಾಣ ಪತ್ರ ನೀಡಲಾಗುವುದು. ಸುಮಾರು 22 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಇನ್ನೊಂದು ವರ್ಷದಲ್ಲಿ 15 ಲಕ್ಷ ರೈತರನ್ನು ಸಹಕಾರಿ ಸಂಸ್ಥೆಗಳ ಬೆಳೆ ಸಾಲದ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. 30 ಸಾವಿರ ಕೋಟಿ ರು. ವರೆಗಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾಕ್ಕೂ ಚಾಲನೆ ದೊರೆತಿದ್ದು, ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ ಎಂದು ವಿವರಿಸಿದರು.

Edited By

Shruthi G

Reported By

hdk fans

Comments