ಬಿಜೆಪಿ ವಿರುದ್ಧ ಮತ್ತೆ ತೊಡೆ ತಟ್ಟಿ , ಕಮಲ ಪಾಳಯಕ್ಕೆ ಸವಾಲೆಸೆದ ಸಿಎಂ ಎಚ್'ಡಿಕೆ..!
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿ, ನಾನೇನು ರಾಜ್ಯದ ಜನರಿಗೆ ಬೆಂಕಿ ಹಚ್ಚಿ ಎಂದು ಹೇಳಿಲ್ಲ. 'ದಂಗೆ' ಪದ ಬಳಸಿದ ಸಂದರ್ಭ ಮತ್ತು ಆಡಿದ ರೀತಿಯನ್ನು ಗಮನಿಸದೆ ಇಲ್ಲದ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಾ ಬಿಜೆಪಿಯವರು ಎಲ್ಲರಿಗೂ ದೂರು ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸರ್ಕಾರ ಪತನವಾಗುತ್ತದೆ ಎಂದು ಹೇಳಿದ ಮಾತ್ರಕ್ಕೆ ಸರ್ಕಾರ ಉರುಳಲ್ಲ. ಬಿಜೆಪಿ ನಾಯಕರಿಂದ ಅಷ್ಟು ಸುಲಭವಾಗಿ ನಮ್ಮಿಂದ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು. ಸರ್ಕಾರ ಸುಭದ್ರವಾಗಿದೆ, ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ, ನನ್ನನ್ನು ನೋಡಿದರೆ ನಿಮಗೆ ಆಂತಕದಲ್ಲಿದ್ದೇನೆ ಎಂದು ಅನಿಸುತ್ತಿದೆಯೇ ಎಂದು ಇದೇ ವೇಳೆ ನೆರೆದಿದ್ದ ಜನರನ್ನು ಕುಮಾರಸ್ವಾಮಿ ಪ್ರಶ್ನಿಸಿದರು. ಮುಖ್ಯಮಂತ್ರಿ ಹುದ್ದೆ ನನಗೆ ದೇವರು ಕೊಟ್ಟ ಅಧಿಕಾರ. ನಾನು ಎಷ್ಟುದಿನ ಅಧಿಕಾರ ದಲ್ಲಿರುತ್ತೇನೆ ಎಂಬುದನ್ನು ಈಗಾಗಲೇ ದೇವರು ತೀರ್ಮಾ ನಿಸಿ ಆಗಿದೆ. ಉತ್ತರ ಕರ್ನಾಟಕದ ಜನ ಸೇರಿ ರಾಜ್ಯದ ಆರೂವರೆ ಕೋಟಿ ಜನ ನನ್ನ ಬಗ್ಗೆ ಯೋಚಿಸುತ್ತಿದ್ದಾರೆ. ಅಯ್ಯೋ ಇವರಿಗೆ ಮತ ನೀಡಲಿಲ್ಲವಲ್ವಾ ಎಂದು ಕೊರಗುತ್ತಿದ್ದಾರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತೀವ್ರ ಹರಿಹಾಯ್ದ ಕುಮಾರಸ್ವಾಮಿ, ಒಂದು ವೇಳೆ ಅವರಿಂದ ಉಪದೇಶ ಹೇಳಿಸಿಕೊಳ್ಳುವ ಸ್ಥಿತಿ ಬಂದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಶಪಥ ಮಾಡಿದರು.
Comments