ಮೈತ್ರಿ ಸರ್ಕಾರಕ್ಕೆ ಯಾವ ಧಕ್ಕೆಯೂ ಇಲ್ಲ ....ಕೊನೆಗೂ ವರ್ಕ್ ಔಟ್ ಆದ ದೇವೇಗೌಡರ ಈ ಅಸ್ತ್ರ..!

ಮೈತ್ರಿ ಸರ್ಕಾರ ಉಳಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿಗೆ ಭರವಸೆ ನೀಡಿದ್ದಾರೆ. ಹಾಗಿದ್ದ ಮೇಲೆ ಸರ್ಕಾರಕ್ಕೆ ಕಿಂಚಿತ್ತೂ ಧಕ್ಕೆಯಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹಳೆಯ ಮುನಿಸು ಮರೆತು ಸಿದ್ದರಾಮಯ್ಯ ಅವರನ್ನು ದೇವೇಗೌಡರು ಹೊಗಳಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಾನಾ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಭಾಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಬಾಂಧವ್ಯವನ್ನು ಭಾಷಣದಲ್ಲಿ ಪ್ರಸ್ತಾಪಿಸುವ ಮೂಲಕ ಅಚ್ಚರಿ ಮೂಡಿಸಿದರು. ''ನಾನು, ಸಿದ್ದರಾಮಯ್ಯ ಒಟ್ಟಿಗೇ ಇದ್ದು ಹೋರಾಟ ಮಾಡಿದವರು. ಆತ್ಮೀಯರಾಗಿದ್ದವರು. ಆದರೆ ಕಾರಣಾಂತರಗಳಿಂದ ಅವರು ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು. ಇದೀಗ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ.
ಈಗ ಸಿದ್ದರಾಮಯ್ಯ ಅವರೇ ಈ ಮೈತ್ರಿ ಸರ್ಕಾರ ಉಳಿಸುವ ಹೊಣೆಗಾರಿಕೆ ನನ್ನದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಸರ್ಕಾರಕ್ಕೆ ಕಿಂಚಿತ್ತೂ ಧಕ್ಕೆ ಆಗಲು ಸಾಧ್ಯವೇ ಇಲ್ಲ'' ಎಂದರು. 135 ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್‌ಗೆ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿ ಇದೆ. ಜತೆಗೆ, ಸಿದ್ದರಾಮಯ್ಯನವರೇ ಸರ್ಕಾರ ಉಳಿಸೋ ಜವಾಬ್ದಾರಿ ತೆಗೆದುಕೊಂಡಿ ದ್ದಾರೆ. ಹೀಗಾಗಿ ನಾನು ಭವಿಷ್ಯ ನುಡಿಯುತ್ತಿದ್ದೇನೆ. ಈ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಾಜಿ ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ ದೇವೇಗೌಡರು, ಅವರ ಸಿಟ್ಟು ಏನೆಂಬುದು ನನಗೆ ಗೊತ್ತಿದೆ. ಸರ್ಕಾರ ರಚಿಸುವಷ್ಟು ಶಾಸಕರ ಸಂಖ್ಯಾಬಲ ಇಲ್ಲದಿದ್ದರೂ ತರಾತುರಿಯಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಅವರ ತಪ್ಪು. ಅದು ಗೊತ್ತಿದ್ದರೂ ಈಗ ನಮ್ಮನ್ನು ಟೀಕಿಸಿದರೆ ಹೇಗೆ? ಎಂದರು.
Comments