ಆಪರೇಷನ್ ‘ಕಮಲ’ಕ್ಕೆ ಸೆಡ್ಡು ಹೊಡೆಯಲು ದೇವೇಗೌಡ್ರು ಎಣೆದ ರಣತಂತ್ರ..!
ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಜೆಡಿಎಸ್, ಕಾಂಗ್ರೆಸ್ ಪಕ್ಷದ ಶಾಸಕರಿಗೆ ಬಿಜೆಪಿ ಹಾಕುತ್ತಿರುವ ಗಾಳಕ್ಕೆ ಸೆಡ್ಡು ಹೊಡೆಯಲು ಜೆಡಿಎಸ್ ತನ್ನ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳುವ ಕಾರ್ಯತಂತ್ರ ರೂಪಿಸಿದ್ದು, ಸರ್ಕಾರದ ಯೋಜನೆಗಳ ಜಾರಿ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಕಾರ್ಯಪ್ರವೃತ್ತವಾಗಿದೆ.
ಶಾಸಕರಿಗೆ ಸಚಿವ ಸ್ಥಾನ ಮತ್ತು ಕೋಟ್ಯಂತರ ರೂ. ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ನಡೆಸಿದೆ.ಬಿಜೆಪಿಯ ಈ ಪ್ರಯತ್ನದಿಂದಾಗಿ ಶಾಸಕರು ಆಮಿಷಕ್ಕೊಳಗಾಗುವ ಸಾಧ್ಯತೆಯಿಂದ ಜೆಡಿಎಸ್ ವರಿಷ್ಠರು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಬೇಲೂರು ರಸ್ತೆಯಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಇಂದು (ಸೆ.22) ರಂದು ಸಂಜೆ ಸಭೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಸಭೆ ಜರುಗಲಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವುದು ಮತ್ತು ರಾಜ್ಯ ರಾಜಕೀಯ ಚಟುವಟಿಕೆಗಳು ದಿನೇ ದಿನೇ ಹೊಸ ತಿರುವು, ದಿಕ್ಕು ಪಡೆದುಕೊಳ್ಳುತ್ತಿರುವ ಕಾರಣ ಶನಿವಾರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಯಾವುದೇ ಕಾರಣಕ್ಕೂ , ಯಾವುದೇ ಪರಿಸ್ಥಿತಿ ಬಂದರೂ ಶಾಸಕರು ಆಸೆ, ಆಮಿಷಗಳಿಗೆ ಒಳಗಾಗಬಾರದು. ಸರ್ಕಾರ ಬೀಳುತ್ತದೆ ಎಂಬ ಸುದ್ದಿಯಿಂದ ಅಧೀರರಾಗದೇ ಗಟ್ಟಿಯಾಗಿ ನಿಲ್ಲಬೇಕು, ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಸೂಚಿಸುವ ಸಾಧ್ಯತೆ ಇದೆ. ವಿರೋಧ ಪಕ್ಷವಾದ ಬಿಜೆಪಿಯ ಆಪರೇಷನ್ ಕಮಲ ವಿಫಲಗೊಳಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಶಾಸಕರೊಡನೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರ ಪಡೆಯಲು ಬಿಜೆಪಿ ಇನ್ನಿಲ್ಲದ ವಾಮಮಾರ್ಗ ಅನುಸರಿಸುತ್ತಿದೆ. ಸಮ್ಮಿಶ್ರ ಸರ್ಕಾರದ ಅಭಿವೃದ್ಧಿಗೆ ಹಿನ್ನಡೆಯಾಗುವಂತೆ ಅಡ್ಡಿಪಡಿಸುವುದು ನಡೆಯುತ್ತಿದೆ. ಬಿಜೆಪಿ ಉಂಟು ಮಾಡುವ ರಾಜಕೀಯ ಗೊಂದಲಗಳ ಬಗ್ಗೆ ಸವಿಸ್ತರವಾಗಿ ಚರ್ಚಿಸಿ, ಪಕ್ಷದ ಶಾಸಕರ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೂಚನೆ ನೀಡಿದ್ದಾರೆ. ಸಾಧ್ಯವಾದರೆ ತಾವು ಕೂಡ ಸಭೆಗೆ ಆಗಮಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದಾರೆ. ಹೀಗೆ ಆಪರೇಷನ್ ಕಮಲ ವಿಫಲಗೊಳಿಸಿ ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗದಂತೆ ಮಾಜಿ ಪ್ರಧಾನಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
Comments