ಸಚಿವ ಸಂಪುಟ ವಿಸ್ತರಣೆ : ಈ ಐವರ ಖಾತೆ ಬದಲಾವಣೆ..! ಯಾರ್ಯಾರಿಗೆ ಯಾವ ಸ್ಥಾನ ಗೊತ್ತಾ?

ಅತೃಪ್ತ ಶಾಸಕರು ಮತ್ತೆ ಬಂಡಾಯ ಏಳುವುದಕ್ಕೆ ಅವಕಾಶ ಕೊಡದಂತೆ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ. ಎರಡು ಮೂರು ಖಾತೆ ಹೊಂದಿರುವ ಸಚಿವರ ಬಳಿ ಒಂದೇ ಖಾತೆಯನ್ನು ಉಳಿಸಿ, ಉಳಿದ ಖಾತೆಗಳನ್ನು ಅತೃಪ್ತ ಶಾಸಕರಿಗೆ ಹಂಚಲು ಹೈಕಮಾಂಡ್ ಸೂಚಿಸಿದೆ.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಬಳಿ ಇರುವ ಗೃಹಖಾತೆಯನ್ನು ಬೇರೊಬ್ಬ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯನ್ನು ಅವರೇ ನಿರ್ವಹಿಸಲಿದ್ದು, ಗೃಹಖಾತೆಯನ್ನು ಸಚಿವ ಸ್ಥಾನ ಆಕಾಂಕ್ಷಿಗಳಿಗೊಬ್ಬರಿಗೆ ನೀಡುವ ಸಾಧ್ಯತೆ ಇದೆ. ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರ ಬಳಿ ಇರುವ ವೈದ್ಯಕೀಯ ಶಿಕ್ಷಣ ಖಾತೆಯನ್ನು ಅತೃಪ್ತ ಶಾಸಕರಿಗೆ ನೀಡಲು ನಿರ್ಧರಿಸಲಾಗಿದ್ದು, ಜಲಸಂಪನ್ಮೂಲ ಖಾತೆಯನ್ನು ಅವರೇ ಉಳಿಸಿಕೊಳ್ಳಲಿದ್ದಾರೆ. ಉನ್ನತ ಶಿಕ್ಷಣ ಖಾತೆ ತಮಗೆ ಬೇಡ ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿರುವ ಜಿಟಿ ದೇವೇಗೌಡ ಅವರ ಖಾತೆಯನ್ನು ಬದಲಿಸಿ, ಅವರಿಗೆ ಬೇರೆ ಖಾತೆ ನೀಡುವ ಸಾಧ್ಯತೆ ಇದೆ. ಅವರ ವಿದ್ಯಾರ್ಹತೆ ಕೇವಲ ಎಸ್ ಎಸ್ ಎಲ್ ಸಿ ಯಷ್ಟೇ ಆಗಿರುವುದರಿಂದ ಆ ಖಾತೆಯನ್ನು ನಿಭಾಯಿಸುವುದು ತಮಗೆ ಕಷ್ಟ ಎಂದು ಈ ಮೊದಲೇ ಅವರು ಅಳಲು ತೋಡಿಕೊಂಡಿದ್ದರು. ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮ್ಮೀರ್ ಅಹ್ಮದ್ ಅವರು ನಿರ್ವಹಿಸುತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನೂ ಬದಲಿಸುವ ಸಾಧ್ಯತೆ ಇದೆ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಖಾತೆಯನ್ನು ಬದಲಿಸಲು ಒತ್ತಾಯಿಸಿದ್ದಾರೆ. ಅಂತೆಯೇ ಸತೀಶ್ ಜಾರಕೀಹೊಳಿ, ಎಂ.ಬಿ.ಪಾಟೀಲ, ರಾಮಲಿಂಗಾ ರೆಡ್ಡಿ, ಬಿ ನಾಗೇಂದ್ರ, ಪಿಟಿ ಪರಮೇಶ್ವರ್ ನಾಯ್ಕ್ ಇವರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಇರುವ ಕೆಲವೇ ಖಾತೆಗಳನ್ನು ಸಮ್ಮಿಶ್ರ ಸರ್ಕಾರ ಹೇಗೆ ಹಂಚಿಕೆ ಮಾಡಲಿದೆ ಎಂಬುದನ್ನು ಕಾದುನೋಡಬೇಕು.
Comments