ಮುತ್ತೂರು ಕೆರೆ ಸಾರ್ವಜನಿಕರ ಹಾಗೂ ಇಟ್ಟಿಗೆ ಗೂಡು ಮಾಲೀಕರ ಸಹಕಾರದೊಂದಿಗೆ ಪುನಶ್ಚೇತನ
ನಗರದ ಹೊರವಲಯದ ಮುತ್ತೂರು ಕೆರೆಯನ್ನು ಸಾರ್ವಜನಿಕರ ಹಾಗೂ ಇಟ್ಟಿಗೆ ಗೂಡು ಮಾಲೀಕರ ಸಹಕಾರದೊಂದಿಗೆ ಪುನಶ್ಚೇತನಗೊಳಿಸಲಾಗುತ್ತಿದ್ದು, 20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು. ಮುತ್ತೂರು ಕೆರೆ ವೀಕ್ಷಣೆ ನಂತರ ತಾಲೂಕು ಕಚೇರಿಯಲ್ಲಿ ಗುರುವಾರ ಕರೆದಿದ್ದ ಇಟ್ಟಿಗೆ ಗೂಡು ಮಾಲೀಕರ ಸಭೆಯಲ್ಲಿ ಮಾತನಾಡಿದರು. ಮುತ್ತೂರು ಕೆರೆ ಅಭಿವೃದ್ಧಿಗೊಳಿಸಬೇಕಾದ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರಿ ಯೋಜನೆಯಿಲ್ಲ. ಸಾರ್ವಜನಿಕರು ಮುಂದೆ ಬಂದು ದೇಣಿಗೆ ನೀಡಿದ್ದಾರೆ. ಇಂದು ಇಟ್ಟಿಗೆ ಗೂಡು ಮಾಲೀಕರಿಗೆ ಕೆರೆ ಮಣ್ಣನ್ನು ತೆಗೆದುಕೊಂಡು ಹೋಗಲು ಮನವಿ ಮಾಡಲಾಗಿದೆ. ಇದಕ್ಕಾಗಿ ಅವರು ಸಹಾಯಧನವಾಗಿ ಜೆಸಿಬಿ, ಟಿಪ್ಪರ್ ಹಾಗೂ ಟ್ರಾ್ಯಕ್ಟರ್ಗಳನ್ನು ಕಾಮಗಾರಿಗೆ ಕಳುಹಿಸಿಕೊಟ್ಟರೆ ಸಾಕು. ವಾಹನಗಳ ವೆಚ್ಚವನ್ನು ಜಿಲ್ಲಾಧಿಕಾರಿ ನಿಧಿಯಿಂದ ಭರಿಸಲಾಗುವುದು ಎಂದರು.
ಸುಮಾರು 5 ಲಕ್ಷ ರೂ. ಸಂಗ್ರಹವಾಗಿದ್ದು, ದೇಣಿಗೆ ನೀಡುವಂತವರು ಜಿಲ್ಲಾಧಿಕಾರಿ ಖಾತೆಗೆ ಚೆಕ್ ಅಥವಾ ಬ್ಯಾಂಕಿಂಗ್ ಮೂಲಕ ಹಣ ನೀಡಬಹುದು ಎಂದು ತಿಳಿಸಿದರು. ತಾಲೂಕಿನ ಹಲವಾರು ಕೆರೆಗಳಲ್ಲಿ ಮಣ್ಣು ತೆಗೆಯಲು ಸಮಸ್ಯೆಯಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಇಟ್ಟಿಗೆ ಗೂಡು ಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಗ್ರಾಮಗಳ ಹೆಸರನ್ನು ಸೂಚಿಸಿ ಲಿಖಿತ ಮನವಿ ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರೀಗೌಡ ತಿಳಿಸಿದರು. ನಾಗರಕೆರೆ ಅಭಿವೃದ್ಧಿ ಕುರಿತ ಮನವಿ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಕೆರೆಯನ್ನೂ ಸಹ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಸುರೇಶ್, ತಹಸೀಲ್ದಾರ್ ಬಿ.ಎ.ಮೋಹನ್, ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಜಿಪಂ ಸದಸ್ಯ ಅಪ್ಪಯ್ಯಣ್ಣ ಇತರರು ಇದ್ದರು.
Comments