ಪೆಟ್ರೋಲ್ ಎಂಬ ಜೀವದ್ರವ್ಯ!
ಪೆಟ್ರೋಲ್ ಎಂಬ ದೇಶದ 'ಜೀವದ್ರವ್ಯ'ದ ಬೆಲೆ ಏರಿಕೆ ಎಲ್ಲ ವರ್ಗದ ಜನರಿಗೂ ಹೊರೆಯೇ. ಏಕೆ ಹಾಗಾಗುತ್ತಿದೆ ಅನ್ನೋದನ್ನು ತಿಳಿದುಕೊಳ್ಳೋಣ, ಇತ್ತೀಚಿನ ವರ್ಷಗಳಲ್ಲಿ ಭಾರತವು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು, ಅದಕ್ಕೆ ಹಣ ಪಾವತಿಸುತ್ತಿದ್ದದ್ದು ಭಾರತದ ರುಪಾಯಿಯಲ್ಲೇ. ಇರಾನ್ ನಿಂದ ತೈಲ ಖರೀದಿಸುವುದರ ಅನುಕೂಲ ಇದು, ರುಪಾಯಿ ಪಡೆದುಕೊಂಡ ಇರಾನ್ ಕೂಡ ನಮ್ಮ ದೇಶದಿಂದ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದು ಎರಡೂ ದೇಶಗಳ ಪಾಲಿಗೆ ಲಾಭದಾಯಕವಾದ ವ್ಯವಹಾರ, ಆದರೆ ಅಮೆರಿಕಕ್ಕೆ ಇರಾನ್ ಮೇಲೆ ಸಿಟ್ಟಿದೆ, ಕಾರಣ ಅದು ಇತ್ತೀಚೆಗೆ ಕೆಲವು ಅಣ್ವಸ್ತ್ರ ಪ್ರಯೋಗಗಳನ್ನು ಮಾಡಿದೆ, ಇದರಿಂದ ಅಕ್ಕಪಕ್ಕದ ರಾಷ್ಟ್ರಗಳಿಗೆ ಅಪಾಯಕಾರಿ ಎಂದು ಘೋಷಿಸಿ, ಆರ್ಥಿಕ ದಿಗ್ಬಂಧನ ಕೂಡ ಹೇರಿದೆ. ಅದು ಅಲ್ಲಿಗೇ ನಿಂತಿಲ್ಲ.... ಆ ದೇಶದ ಪ್ರಮುಖ ಆದಾಯ ಮೂಲ ತೈಲ, ಆ ದೇಶದಿಂದ ಯಾರಾದರೂ ತೈಲ ಆಮದು ಮಾಡಿಕೊಂಡರೆ ಅವರ ಜತೆಗೂ ನಮ್ಮ ಸ್ನೇಹ ಇರಲ್ಲ ಅಂತ ಬಲಿಷ್ಠರಿಗೆ ಮೆದುವಾಗಿಯೂ, ಏಯ್, ಹುಷಾರು ಎಂದು ದುರ್ಬಲರಿಗೂ ಹೆದರಿಸಿದೆ.
ಭಾರತ-ಚೀನಾಕ್ಕೆ ಧಮಕಿ ಹಾಕಿದ ಅಮೆರಿಕದ ಈ ಬೆದರಿಕೆ-ಧಮಕಿ ಹೊರತಾಗಿಯೂ ಅಮೆರಿಕವನ್ನು ಓಲೈಸಿ, ತೀರಾ ಇರಾನ್ ನನ್ನು ತೆಗೆದುಹಾಕದೆ ಭಾರತ-ಚೀನಾ ತೈಲ ಆಮದು ಮಾಡಿಕೊಳ್ಳಲು ಮುಂದಾದಾಗ ದೊಡ್ಡಣ್ಣನಿಗೆ ಸಿಟ್ಟು ಬಂದಿದೆ. ಮೊನ್ನೆ ಅಮೆರಿಕದಲ್ಲಿ ಭಾರತ-ಚೀನಾದಂಥ ದೇಶಗಳಿಗೆ ಯಾಕೆ ಸಬ್ಸಿಡಿ ಕೊಡಬೇಕು? ನಾವೂ ಅಭಿವೃದ್ಧಿ ಹೊಂದುತ್ತಿರುವ ದೇಶ, ಮೊದಲು ನಮಗೆ ಆಮೇಲೆ ಉಳಿದವರಿಗೆ ಎಂದು ಟ್ರಂಪ್ ಸಿಕ್ಕಾಪಟ್ಟೆ ಕೂಗಾಡಿದ್ದು-ಚಪ್ಪಾಳೆ ಗಿಟ್ಟಿಸಿದ್ದು ಇದೇ ಹಿನ್ನೆಲೆಯಲ್ಲಿ. ಹಾಗೆ ನೋಡಿದರೆ ಭಾರತಕ್ಕಿಂತ ಚೀನಾ ಮೇಲೆ ಟ್ರಂಪ್ ಗೆ ಹೆಚ್ಚು ಸಿಟ್ಟು ಇರುವುದರಿಂದ ನಾಲ್ಕು ಮಾತು ಜಾಸ್ತಿಯೇ ಆ ದೇಶಕ್ಕೆ ಬೈಯ್ದಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಇರಾನ್ ನಿಂದ ತೈಲ ಖರೀದಿ ಸಾಧ್ಯವಿಲ್ಲ ಆದ್ದರಿಂದ ಒಪೆಕ್ ನ ಪಟ್ಟಿಯಲ್ಲಿರುವ ಬೇರೆ ಕಡೆಯಿಂದ ತೈಲ ಖರೀದಿ ಮಾಡುವುದು ಭಾರತಕ್ಕೆ ಅನಿವಾರ್ಯ. ಏಕೆಂದರೆ ಇಷ್ಟು ಜನಸಂಖ್ಯೆ ಇರುವ ದೇಶಕ್ಕೆ ದಿನವೊಂದಕ್ಕೆ ಎಷ್ಟು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೇಕಾಗಬಹುದು ಅನ್ನೋದನ್ನು ಊಹಿಸಿ. ಬೇರೆ ಕಡೆಯಿಂದ ಹಾಗೆ ತೈಲ ಖರೀದಿ ಮಾಡುವಾಗ ಅಮೆರಿಕದ ಡಾಲರ್ ನಲ್ಲೇ ಪಾವತಿ ಮಾಡಬೇಕಾಗುತ್ತದೆ. ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ನಿಯಮ. ಆಗ ಸಹಜವಾಗಿ ಡಾಲರ್ ಬಲಿಷ್ಠವಾಗುತ್ತದೆ, ಇರಾನ್ ನಿಂದ ಖರೀದಿಸುವಾಗ ಅವರು ರುಪಾಯಿ ಪಡೆಯುತ್ತಿದ್ದರು, ಜತೆಗೆ ನಮ್ಮಿಂದ ಅನೇಕ ವಸ್ತುಗಳನ್ನು ಖರೀದಿಸುತ್ತಿದ್ದರು, ಅದರಿಂದ ಭಾರತದ ಆರ್ಥಿಕತೆ ಬಹಳ ಅನುಕೂಲವಿತ್ತು. ಕೇಂದ್ರ-ರಾಜ್ಯ ಸರಕಾರದ ವ್ಯಾಟ್ ನಿಂದ ಸಿಕ್ಕಾಪಟ್ಟೆ ದುಬಾರಿಯಾಗಿದೆ ಇನ್ನು ಭಾರತದಲ್ಲಿ ಪೆಟ್ರೋಲ್ ಉತ್ಪನ್ನ ಸಿದ್ಧವಾಗುವುದು ನಲವತ್ತು ರುಪಾಯಿ ಚಿಲ್ಲರೆಯೊಳಗೇ. ಅದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದ ವ್ಯಾಟ್ ಸೇರಿ ಎಂಬತ್ತೂ ಚಿಲ್ಲರೆ ಆಗುತ್ತದೆ. ಅಂದರೆ ಶೇಕಡಾ ತೊಂಬತ್ತೆಂಟಕ್ಕಿಂತ ಹೆಚ್ಚು ಬೀಳುತ್ತದೆ. ಈವರೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತಂದಿಲ್ಲ, ಆದ್ದರಿಂದಲೇ ಹೀಗಾಗುತ್ತಿದೆ. ಜನರ ಬಗ್ಗೆ ಕಾಳಜಿ ಇರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತಮ್ಮ ಆದಾಯವಾದ ಈ ವ್ಯಾಟ್ ಅನ್ನು ಬಿಟ್ಟುಕೊಟ್ಟು, ಜಿಎಸ್ ಟಿ ಒಳಗೆ ತಂದುಬಿಡಲಿ. ಆಗ ಈ ಹೊರೆ ತಾನಾಗಿಯೇ ಇಳಿದು ಹೋಗುತ್ತದೆ.
ಕೃಪೆ: ಒನ್ ಇಂಡಿಯಾ ಕನ್ನಡ
Comments