ರಾಜ್ಯ ಸರ್ಕಾರದಿಂದ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಯೋಜನೆ ಜಾರಿ..!
ಇಂದು ಬೆಳಗ್ಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ರವರು ಯಶವಂತಪುರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಣ್ಣ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರುಕಟ್ಟೆ ವ್ಯಾಪಾರಿಗಳು ಸದ್ಯ ಮೀಟರ್ ದಂಧೆಯಿಂದಾಗಿ ತಾವು ಅನುಭವಿಸುತ್ತಿರುವ ಕಷ್ಟ ಕೋಟಲೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಮೊಬೈಲ್ ಆಯಪ್ ಆಧಾರಿತ ಧನ ಸಹಾಯ ನೀಡುವ ಯೋಜನೆಯೇ ಬಡವರ ಬಂಧು. ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಲಾಗುತ್ತಿದೆ. ಮೀಟರ್ ಬಡ್ಡಿ ದಂಧೆಯಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರು ಶೋಷಣೆಗೆ ಒಳಗಾಗುತ್ತಿರುವುದನ್ನು ಮನಗಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವುದಾಗಿ ಪ್ರಕಟಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಸಮ್ಮಿಶ್ರ ಸರ್ಕಾರದಿಂದ ಬಡವರ ಬಂಧು ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಯ ರೂಪುರೇಷೆಗಳನ್ನು ಈಗಾಗಲೇ ರೂಪಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆ ಅರಿಯಲು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
Comments