ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಸಿಎಂ ಎಚ್'ಡಿಕೆ..! ರೈತರು ಮಾಡಿರುವ ಈ ಸಾಲ 2 ಲಕ್ಷ ರೂ.ವರೆಗೆ ಮನ್ನಾ..!
ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 1 ಲಕ್ಷ ರೂ.ವರೆಗಿನ ಸಾಲಮನ್ನಾ ಕುರಿತು ಈಗಾಗಲೇ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಇದೀಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರು ಮಾಡಿರುವ ಎನ್‌ಪಿಎ, ಸುಸ್ತಿ ಮತ್ತು ಮರು ಹೊಂದಾಣಿಕೆ ಮಾಡಿರುವ 2 ಲಕ್ಷ ರೂ.ವರೆಗಿನ ಸಾಲಮನ್ನಾ ಕುರಿತು ಆದೇಶ ಹೊರಡಿಸಿದೆ.
ಅಲ್ಲದೆ, ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸಲು ಮುಂದಾಗಿರುವ ಸರ್ಕಾರ ಅದಕ್ಕಾಗಿ "ಋಣ ಪರಿಹಾರ ಅಧಿನಿಯಮ 2018' ಕುರಿತು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ. ಈ ಹಿಂದೆ 1976 ಮತ್ತು 1980ರಲ್ಲಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲಾಗಿತ್ತು. ಈ ಎರಡು ವಿಚಾರಗಳ ಕುರಿತಂತೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದರು. ಸಾಲಮನ್ನಾ ಯೋಜನೆಯ ಪ್ರಕ್ರಿಯೆಗಳನ್ನು ಮುಂದುವರಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನೊಳಗೊಂಡ ನೋಡಲ್ ಸಮಿತಿ ರಚಿಸಲಾಗಿದೆ. ಈ ಸಮಿತಿ ಬ್ಯಾಂಕ್‌ಗಳೊಂದಿಗೆ ಸಂಪರ್ಕ ಹೊಂದಿ ಸಾಲಮನ್ನಾದ ಅನುಕೂಲ ನೇರವಾಗಿ ರೈತರಿಗೆ ತಲುಪುವಂತೆ ಮಾಡಲಿದೆ. ಇದರ ಜತೆಗೆ ಚಾಲ್ತಿ ಸಾಲದ ಪೈಕಿ 25 ಸಾವಿರ ರೂ. ಮನ್ನಾ ಮಾಡಲಾಗುತ್ತದೆ. ಈ ಮೊತ್ತವನ್ನು ರೈತರ ಸಾಲದ ಖಾತೆಗೆ ಸರ್ಕಾರ ಜಮಾ ಮಾಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಖಾಸಗಿಯವರಿಂದಲೂ ಸಾಲ ಮಾಡಿದ್ದು, ಅವರನ್ನು ಋಣಮುಕ್ತಗೊಳಿಸುವ ಸಲುವಾಗಿ ಋಣ ಪರಿಹಾರ ಅಧಿನಿಯಮ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಅದಕ್ಕಾಗಿ ಅಧಿನಿಯಮವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು. ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಅಧಿನಿಯಮ ಜಾರಿಯಾಗಲಿದ್ದು, ಇದರಿಂದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರದಿರುವ ಭೂ ರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಹಾಗೂ ದುರ್ಬಲ ವರ್ಗದ ವ್ಯಕ್ತಿಗಳು ಖಾಸಗಿಯವರಿಂದ ಪಡೆದಿರುವ ಸಾಲಗಳಿಂದ ಮುಕ್ತರಾಗಲಿದ್ದಾರೆ. ಒಂದೊಮ್ಮೆ ಖಾಸಗಿಯವರು ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅಧಿನಿಯಮದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ರೈತರ ಸಾಲ ಮನ್ನಾಕ್ಕೆ ಬ್ಯಾಂಕ್‌ಗಳು ಒಪ್ಪಿದ್ದರೂ ನಂತರದಲ್ಲಿ ಬಡ್ಡಿ ರಿಯಾಯಿತಿ ಸಾಧ್ಯವಿಲ್ಲ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ಬಡ್ಡಿ ಸಹಿತ 30163 ಕೋಟಿ ರೂ. ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
Comments