ಬೆಂಗಳೂರಲ್ಲೇ ಏರ್ ಶೋ ನಡೆಸಬೇಕೆಂದು ಕೇಂದ್ರಕ್ಕೆ ಎಚ್'ಡಿಡಿ ಆಗ್ರಹ
ಬೆಂಗಳೂರಿನಲ್ಲೇ ಏರೋ ಇಂಡಿಯಾ-2018 ಶೋ ನಡೆಸಬೇಕೆಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ತಾವು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಬೆಂಗಳೂರಿನಲ್ಲೇ ಏರ್ ಶೋ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು.
ಈ ಬಾರಿ ಏರ್ ಶೋ ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಏರೋ ಇಂಡಿಯಾ ಶೋ ವಿಶ್ವವಿಖ್ಯಾತಿಗಳಿಸಿದೆ. ಈ ಬಾರಿಯೂ ಅದು ಇಲ್ಲೇ ನಡೆದರೆ ಚೆನ್ನಾಗಿರುತ್ತದೆ ಎಂದು ಹೇಳಿದರು. ಸಕಾರಣ ನೀಡದೇ ಸ್ಥಳ ಬದಲಾವಣೆ ಮಾಡುವುದು ಸರಿಯಲ್ಲ. ಅನಂತಕುಮಾರ್ ಅವರಂಥ ಹಿರಿಯ ಸಚಿವರು ಕೇಂದ್ರ ಮಂತ್ರಿಮಂಡಲದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರೂ ಈ ಬೆಳವಣಿಗೆ ಸರಿಯಲ್ಲ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಹೊರತಪಡಿಸಿ ಅನ್ಯ ರಾಜ್ಯದಲ್ಲಿ ಏರೋ ಇಂಡಿಯಾ-2018 ಶೋ ನಡೆಸುವುದು ಬೇಡ. ಈ ಬಗ್ಗೆ ತಾವು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಗೌಡರು ತಿಳಿಸಿದರು.
Comments