ಬಿಗ್ ಬ್ರೇಕಿಂಗ್ : ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಹೊಸ ಟ್ವಿಸ್ಟ್..! ಏನ್ ಗೊತ್ತಾ?



ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಶಾಸಕ, ಹಿರಿಯ ನಾಯಕ ಎಚ್.ವಿಶ್ವನಾಥ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದ್ದು, ಒಂದು ವೇಳೆ ಅವರಾಗಿಯೇ ನಿರಾಕರಿಸಿದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಆ ಸ್ಥಾನ ಒಲಿದು ಬರುವ ಸಾಧ್ಯತೆಯಿದೆ.
ಇದೆ ಭಾನುವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಕ್ಷದ ಶಾಸಕರ ಸಭೆ ಕರೆದಿದ್ದು, ಆ ಸಭೆಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವೂ ಪ್ರಮುಖವಾಗಿ ಪ್ರಸ್ತಾಪವಾಗುವ ಸಂಭವವಿದೆ. ವಿಶ್ವನಾಥ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸುವ ನಿರೀಕ್ಷೆಯೂ ಇದೆ ಎಂದು ತಿಳಿದು ಬಂದಿದೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಿಂದಲೂ ಕಾಂಗ್ರೆಸ್ ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ವಿಶ್ವ ನಾಥ್ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಹುಣುಸೂರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೈಸೂರು ಭಾಗದ ಅನುಭವಿ ರಾಜಕಾರಣಿ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ವಿಶ್ವನಾಥ್ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗುತ್ತಾರೆಂಬ ನಿರೀಕ್ಷೆ ಯಿತ್ತಾದರೂ ಕೊನೇ ಗಳಿಗೆಯಲ್ಲಿ ಅದು ಸುಳ್ಳಾಯಿತು. ಈಗ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ವಿಶ್ವನಾಥ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಹೊಣೆವಹಿಸಲು ನಿರ್ಧರಿಸಿದ್ದಾರೆ.
'ರಾಜ್ಯಾಧ್ಯಕ್ಷರ ಹುದ್ದೆ ಎಂದು ಕೇಳಿಲ್ಲ, ಅವರು ಕೊಟ್ಟರೆ ಖಂಡಿತ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವೆ. ಈ ಸಂಬಂಧ ಒಮ್ಮೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಜತೆಗೆ ಚರ್ಚಿಸಿ ಪಕ್ಷ ಸಂಘಟನೆಗೆ ನೀವು ಒಪ್ಪಬೇಕು ಎಂದಿದ್ದು ನಿಜ. ಆಗ ನಾನು ನನಗೆ ವಯಸ್ಸಾಗಿದೆ, ಬೇರೆ ಯಾರಿಗಾದರೀ ಆ ಜವಾಬ್ದಾರಿ ಕೊಡಿ ಎಂದು ಹೇಳಿ ನಿರಾಕರಿಸಿದ್ದೆ' ಎಂದು ಖುದ್ದು ವಿಶ್ವನಾಥ್ ತಿಳಿಸಿದರು. 'ಆದರೂ ನಿಮ್ಮಂಥವರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳಬೇಕೆಂದು ಅವರು ಹೇಳಿದ್ದಾರೆ. ಕುಮಾರಸ್ವಾಮಿ ಕೂಡ ನಿಮಗೆ ಮುಂದೆ ಒಳ್ಳೆಯ ಅವಕಾಶ ಅರಸಿಬರಲಿದೆ ಎಂದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಜತೆಗೆ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ತಳಹಂತದಿಂದ ಪಕ್ಷ ಕಟ್ಟುವ ಮೂಲಕ ಮುಂಬರುವ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಇತರೆ ಚುನಾವಣೆಗಳಲ್ಲಿ ಜೆಡಿಎಸ್ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ' ಎಂದು ಹೇಳಿದರು. ಆದರೂ ಪಕ್ಷದಲ್ಲಿ ವಿಶ್ವನಾಥ್ ನೇಮಕದ ಬಗ್ಗೆ ಇನ್ನೂ ಅನುಮಾನದ ಸುದ್ದಿಗಳು ತೇಲಿಬರುತ್ತಿವೆ. ಹಾಗೊಂದು ವೇಳೆ ವಿಶ್ವನಾಥ್ ಅವರು ರಾಜ್ಯಾಧ್ಯಕ್ಷರಾಗದಿದ್ದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಆ ಜವಾಬ್ದಾರಿ ನೀಡಬಹುದು ಎನ್ನಲಾಗುತ್ತಿದೆ.
Comments