ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಗೆ 2ನೇ ಬಾರಿ ಒಲಿದು ಬಂದ ಅದೃಷ್ಟ
ಜಿಟಿ ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾದವರು. ಎರಡನೇ ಬಾರಿ ಗೆದ್ದಾಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾರೆ.
ಮಂತ್ರಿಯಾಗಿದ್ದು ಕೂಡ ಅದೇ ಮೊದಲು. ಈ ಬಾರಿ ಗೆದ್ದ ನಂತರ ಎರಡನೇ ಬಾರಿಗೆ ಮಂತ್ರಿಯಾಗಿ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡಿದ್ದಾರೆ. ಈ ಬಾರಿಯೂ ಉಸ್ತುವಾರಿಯಾಗಿ ಮೈಸೂರು ಜಿಲ್ಲೆಗೆ ನಿಯೋಜಿಸಲಾಗಿದೆ. ಸಾ.ರಾ. ಮಹೇಶ್ ಅವರು ಕೆ.ಆರ್. ನಗರ ಕ್ಷೇತ್ರದಿಂದ 2008, 2013 ಹಾಗೂ 2018- ಹೀಗೆ ಸತತ ಮೂರು ಬಾರಿ ಆಯ್ಕೆಯಾದವರು. ಕೆ.ಆರ್. ನಗರದಲ್ಲಿ ಮೊದಲ ಹ್ಯಾಟ್ರಿಕ್ ಬಾರಿಸಿದವರು. ಇದೇ ಮೊದಲ ಬಾರಿಗೆ ಮಂತ್ರಿಯಾಗಿ ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ವಹಿಸಿಕೊಂಡಿದ್ದಾರೆ. ಅವರಿಗೆ ಪಕ್ಕದ ಕೊಡಗು ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಈವರೆಗೆ ಚಾಮರಾಜನಗರ ಕ್ಷೇತ್ರದಿಂದ ಗೆದ್ದವರು ಮಂತ್ರಿಯಾಗಿರಲಿಲ್ಲ. ಆದರೆ ಪುಟ್ಟರಂಗಶೆಟ್ಟಿ ಅವರು ಮಂತ್ರಿಯಾಗುವ ಮೂಲಕ ಕ್ಷೇತ್ರದ ಪ್ರಥಮ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಲ್ಲದೇ ಅವರಿಗೆ ಸ್ವಂತ ಜಿಲ್ಲೆಯ ಉಸ್ತುವಾರಿಯೇ ಲಭಿಸಿದೆ. ಎಚ್. ನಾಗಪ್ಪ, ಜಿ. ರಾಜೂಗೌಡ, ಎಚ್.ಎಸ್. ಮಹದೇವಪ್ರಸಾದ್, ಡಾ.ಗೀತಾ ಮಹದೇವಪ್ರಸಾದ್ ಅವರ ನಂತರ ಸ್ವಂತ ಜಿಲ್ಲೆಯ ಉಸ್ತುವಾರಿ ನಿರ್ವಹಿಸುವ ಅವಕಾಶ ಒದಗಿ ಬಂದಿದೆ. ಎನ್. ಮಹೇಶ್ ಅವರಿಗೆ ಎಲ್ಲವೂ ಪ್ರಥಮ. ಇದೇ ಬಾರಿಗೆ ಕೊಳ್ಳೇಗಾಲ ಕ್ಷೇತ್ರದಿಂದ ಆಯ್ಕೆ. ಇದೇ ಪ್ರಥಮ ಬಾರಿಗೆ ಮಂತ್ರಿಯಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ನಿರ್ವಹಣೆ. ಅಲ್ಲದೇ ಪ್ರಥಮ ಬಾರಿ ಉಸ್ತುವಾರಿ ಮಂತ್ರಿಯಾಗಿ ಗದಗ ಜಿಲ್ಲೆಗೆ ನಿಯೋಜಿಸಲಾಗಿದೆ.
Comments