ಲೋಕಸಭಾ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನಲೆ ಅಖಾಡಕ್ಕಿಳಿಯಲು ಫಿಕ್ಸ್ ಆಯ್ತು ಕ್ಷೇತ್ರಗಳು..!! ಯಾರಿಗೆ ಯಾವ ಕ್ಷೇತ್ರ..!?

ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮುಂದುವರೆಸಲು ನಿರ್ಧರಿಸಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ಇದೀಗ ಕ್ಷೇತ್ರ ಹಂಚಿಕೆ ಸಂಬಂಧ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಇದೆ.
ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವಿರುವ ಜೆಡಿಎಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿದಿದೆ ಎನ್ನಲಾಗಿದ್ದು, ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು,ಮಧ್ಯ ಕರ್ನಾಟಕದ ಶಿವಮೊಗ್ಗ, ಮುಂಬೈ ಕರ್ನಾಟಕದ ವಿಜಯಪುರ, ಹೈದರಾಬಾದ್ ಕರ್ನಾಟಕದ ರಾಯಚೂರು ಮತ್ತು ಬೀದರ್ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದೆ ಎನ್ನಲಾಗಿದೆ. ಇದುವರೆಗೆ ಸ್ಥಾನ ಹೊಂದಾಣಿಕೆಯ ಬಗ್ಗೆ ಉಭಯ ಪಕ್ಷಗಳ ನಡುವೆ ಯಾವುದೇ ರೀತಿಯ ಗಂಭೀರ ಚರ್ಚೆಗಳು ನಡೆಯದೇ ಇದ್ದರೂ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಮುಂಚೂಣಿಯಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರಾಬಲ್ಯ ಮತ್ತು ಪ್ರಭಾವ ಹೆಚ್ಚಿಸಿಕೊಳ್ಳುವ ಸಂಬಂಧ ಕನಿಷ್ಠ 5 ಅಥವಾ 6 ಸ್ಥಾನಗಳನ್ನಾದರೂ ಕರ್ನಾಟಕದಲ್ಲಿ ಗೆಲ್ಲಬೇಕು ಎಂಬ ಲೆಕ್ಕಾಚಾರವನ್ನು ದೊಡ್ಡಗೌಡರು ಹೊಂದಿದ್ದಾರೆ. ಕಾಂಗ್ರೆಸ್ ವರಿಷ್ಠರ ಜೊತೆಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾತು ಜೆಡಿಎಸ್ ಪಾಳೆಯದಿಂದ ಬಲವಾಗಿ ಕೇಳಿಬಂದಿದೆ. ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬ ಳ್ಳಾಪುರ, ತುಮಕೂರು ಕ್ಷೇತ್ರಗಳ ಜೊತೆಗೆ ಮಧ್ಯ ಕರ್ನಾಟಕದ ಶಿವಮೊಗ್ಗ, ಮುಂಬೈ ಕರ್ನಾಟಕದ ವಿಜಯಪುರ, ಹೈದ್ರಾಬಾದ್ ಕರ್ನಾಟಕದ ರಾಯಚೂರು ಹಾಗೂ ಬೀದರ್ ಕ್ಷೇತ್ರಗಳನ್ನೂ ತಾವು ಸ್ಪರ್ಧಿಸಬಹುದಾದ ಪಟ್ಟಿಯಲ್ಲಿ ಜೆಡಿಎಸ್ ನಾಯಕರು ಇಟ್ಟುಕೊಂಡಿದ್ದಾರೆ. ಈ ಪೈಕಿ ಅವರ ಆದ್ಯತೆ ಹಳೆ ಮೈಸೂರು ಭಾಗದ ಆರು ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಇರಲಿದೆ. ಜೆಡಿಎಸ್ ಬಯಸಿರುವ ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಸದಸ್ಯರಿದ್ದಾರೆ. ಅವುಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಆದರೆ, ಸಂಸತ್ತಿನಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಹೆಚ್ಚು ಸ್ಥಾನಗಳು ಬೇಕು ಎಂದಾದರೆ ತಾವು ಕೇಳಿದ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಕಾಂಗ್ರೆಸ್‌ಗೆ ಅನಿವಾರ್ಯ ಎಂಬ ಯೋಚನೆಯಲ್ಲಿ ದೇವೇಗೌಡರಿದ್ದಾರೆ. ಇಲ್ಲದಿದ್ದರೆ ನಿರೀಕ್ಷಿತ ಸಂಖ್ಯಾ ಬಲ ಪಡೆಯಲು ಅಡ್ಡಿಯಾಗುತ್ತದೆ.
Comments