ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಸಂತಸದ ಸುದ್ದಿ..! ಬಂಪರ್ ಕೊಡುಗೆ ಕೊಟ್ಟ ಕುಮಾರಣ್ಣ..!!
ರೈತರ ಬೆಳೆ ಸಾಲ ಮನ್ನಾ ಯೋಜನೆ ಕುರಿತು ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಭೆ ನಡೆದಿದ್ದು, ಸರ್ಕಾರವು ಸಹಕಾರಿ ವಲಯದ ಸಾಲ, ಪ್ರೋತ್ಸಾಹಧನ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ ಸೇರಿ ಒಟ್ಟು ಸುಮಾರು 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸಾಲ ಮನ್ನಾ ಕುರಿತು ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಲಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ರೈತರಿಗೆ ಹೊಸ ಬೆಳೆ ಸಾಲ ನೀಡಲು ಅನುಕೂಲ ಕಲ್ಪಿಸುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಈ ಕುರಿತು ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ದು, ತಮ್ಮ ಕೇಂದ್ರ ಕಚೇರಿ ಅಧಿಕಾರಿಗಳ ಜೊತೆ ಚರ್ಚಿಸಿ, ನಿರ್ದೇಶಕ ಮಂಡಳಿ ಅನುಮೋದನೆ ಪಡೆಯುವವುದಾಗಿ ತಿಳಿಸಿದ್ದಾರೆ. ಬ್ಯಾಂಕುಗಳು ಅರ್ಹ ಸಾಲಗಳ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಡಿಜಿಟಲ್ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸಾಲ ಮನ್ನಾ ಮಾಡಲು ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. 37,159 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ, 9448 ಕೋಟಿ ರೂ. ಹೊಸಚಾಲ್ತಿ ಸಾಲ ಎಲ್ಲ ಸೇರಿ ಸುಮಾರು 48,000 ಕೋಟಿ ರೂ. ಗಳಷ್ಟಾಗುತ್ತವೆ ಎಂದು ಸಿಎಂ ಎಚ್’ಡಿಕೆ ತಿಳಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಕುರಿತ ಅನುದಾನವನ್ನು ಆರ್ಥಿಕ ಇಲಾಖೆ ಈಗಾಗಲೇ ಬಿಡುಗಡೆ ಮಾಡಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಆತಂಕ ಪಡಬೇಕಾಗಿಲ್ಲ. ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸಿಎಂ ಎಚ್’ಡಿಕೆ ಮನವಿ ಮಾಡಿದರು.
Comments