ಗುಡ್ ನ್ಯೂಸ್ : ಕೊಡಗು ಜಿಲ್ಲೆಗೆ ಬಂಪರ್ ಕೊಡುಗೆ ಕೊಟ್ಟ ಕುಮಾರಣ್ಣ..!!
ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಕಾಲ ಸುರಿದ ಧಾರಾಕಾರ ಮಳೆಗೆ ಸುಮಾರು 329 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಕೊಡಗನ್ನು ಎಂದಿಗೂ ಸರ್ಕಾರ ಕಡೆಗಣಿಸಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದರು. ಮಳೆ ಹಾನಿ ಪರಿಹಾರವಾಗಿ ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಗಾಳಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇಲ್ಲಿಯವರೆಗೆ ಕೇವಲ 5 ಸಾವಿರ ರೂ. ಪರಿಹಾರವಾಗಿ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮನೆ ಸಂಪೂರ್ಣವಾಗಿ ನಾಶವಾದರೆ ಅದರ ಮಾಲೀಕರಿಗೆ 95 ಸಾವಿರ ರೂ. ಪರಿಹಾರಧನ ಮತ್ತು ಆಶ್ರಯ ಮನೆ ನಿರ್ಮಿಸಿಕೊಡಲಾಗುವುದೆಂದು ಮುಖ್ಯಮಂತ್ರಿಗಳು ಇದೇ ಸಂದರ್ಭ ತಿಳಿಸಿದರು. ಜಲಾವೃತಗೊಂಡು ಭತ್ತದ ಕೃಷಿ ನಾಶವಾಗಿ ನಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಲಾಗುವುದು. ಹಾನಿಗೊಳಗಾಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆಗಳ ದುರಸ್ತಿಗೆ ಅಗತ್ಯವಿರುವ ಕ್ರಿಯಾಯೋಜನೆ ಮತ್ತು ಟೆಂಡರ್ ಪ್ರಕ್ರಿಯೆಯನ್ನು ಮುಂದಿನ 15 ದಿನಗಳ ಒಳಗೆ ಪೂರ್ಣಗೊಳಿಸುವಂತೆ ಈಗಾಗಲೆ ಲೋಕೋಪಯೋಗಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು. ಕಾಫಿ ಬೆಳೆ ಹಾನಿಯ ವರದಿಯನ್ನು ತಯಾರಿಸಲು ಕಾಫಿ ಮಂಡಳಿ ಕನಿಷ್ಠ ಒಂದು ತಿಂಗಳ ಕಾಲಾವಕಾಶ ಕೋರಿದ್ದಾರೆಂದು ಅವರು ಇದೇ ಸಂದರ್ಭ ತಿಳಿಸಿದರು. ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ 139 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಮೊದಲ ಹಂತದಲ್ಲಿ 12 ಕೊಟಿ ರೂ.ಗಳಿಗೆ ಕೋರಿಕೆ ಇದೆ. ಜಿಲ್ಲಾ ಪಂಚಾಯತ್ 48 ಕೋಟಿ ರೂ.ಗಳ ಬೇಡಿಕೆಯನ್ನಿಟ್ಟಿದೆ. ಹೀಗೆ ಒಟ್ಟು ಜಿಲ್ಲಾ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದಾಗಿ 329 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎನ್ನುವ ವರದಿ ಬಂದಿದ್ದು, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆಯೆಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದರು.
Comments