ವೇದಿಕೆಯ ಮೇಲೆ ಕುಮಾರಣ್ಣ ಭಾವನಾತ್ಮವಾಗಿ ಕಣ್ತುಂಬಿಕೊಂಡಿದ್ದೇಕೆ…!?
ನಿಮ್ಮ ಅಣ್ಣನೋ, ತಮ್ಮನೋ ಮುಖ್ಯಮಂತ್ರಿಯಾಗಿದ್ದಾನೆ ಎಂಬ ಸಂತೋಷದಲ್ಲಿ ನೀವಿದ್ದೀರಿ. ಆದರೆ ನಾನು ಸಂತೋಷವಾಗಿಲ್ಲ. ನನ್ನ ನೋವನ್ನು ನಾನೇ ವಿಷಕಂಠನಾಗಿ ನೋವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿ ಬಹಿರಂಗ ಸಭೆಯಲ್ಲಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ ಪ್ರಸಂಗ ಇಂದು ನಡೆಯಿತು.
ನಗರದ ಜೆಪಿ ಭವನದಲ್ಲಿ ಜೆಡಿಎಸ್ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದು, ಮೆರೆಯಬೇಕೆಂಬ ಆಸೆಯಿಂದ ಅಲ್ಲ. ನಾನು ಹೋದ ಕಡೆ ಜನ ಸೇರುತ್ತಾರೆ, ಸಂತೋಷ ಪಡುತ್ತಾರೆ. ಆದರೆ ನನ್ನ ಪಕ್ಷಕ್ಕೆ ಬಹುಮತ ಕೊಡೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಲಮನ್ನಾದ ವಿಚಾರ ಪ್ರಸ್ತಾಪಿಸಿದಾಗ ನನ್ನ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನಾನು ನನ್ನ ರೈತರನ್ನು ಉಳಿಸಲು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದರು.
ಪೆಟ್ರೋಲ್ ದರ ಏರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಕೇಂದ್ರ ಸರಕಾರ 11 ಬಾರಿ ಪೆಟ್ರೋಲ್ ದರ ಏರಿಸಿದರೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಕೊಡಗು ಜಿಲ್ಲೆಯ ಹುಡುಗನೊಬ್ಬ ವಿಡಿಯೋ ಹಾಗೂ ಉಡುಪಿ ಜಿಲ್ಲೆಯವರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅವರು ನಮ್ಮ ಸಿಎಂ ಅಲ್ಲ ಎಂದು ಬರೆದುಕೊಂಡ ಬಗ್ಗೆಯೂ ಉಲ್ಲೇಖಿಸಿದರು. ನಾನು ಪೂರ್ಣ ಬಹುಮತ ಪಡೆದು ಮುಖ್ಯಮಂತ್ರಿಯಾಗಿಲ್ಲ. ಸದ್ಯಕ್ಕೆ ಸನ್ಮಾನ ಸ್ವೀಕರಿಸುವಂತೆ ನನ್ನ ಒತ್ತಾಯಿಸಬೇಡಿ ಎಂದು ಸಂಘಟಕರಲ್ಲಿ ಮನವಿ ಮಾಡಿಕೊಂಡರು.
Comments