ಕುಮಾರಣ್ಣ ನ ಸರ್ಕಾರದಿಂದ ಮೊದಲ ಬಾರಿ ಮಾವಿಗೆ ದೊಡ್ಡ ಮೊತ್ತದ ಬೆಂಬಲ ಬೆಲೆ ಘೋಷಣೆ..!
ಬೆಲೆ ಕುಸಿತಕ್ಕೆ ಒಳಗಾಗಿರುವವರಿಗೆ ಬೆಂಬಲ ಬೆಲೆ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಚರ್ಚೆ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಪ್ರತಿ ಟನ್ ಮಾವಿಗೆ 2000 ರೂ. ಖರೀದಿಸಲು ಸೂಚನೆ ನೀಡಿದೆ.
ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಮುಖ್ಯಮಂತ್ರಿಗಳು ನೆರೆಯ ರಾಜ್ಯಗಳ ಮುಖ್ಯಮಂತ್ರಿಯವರ ಜೊತೆ ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೆರೆಯ ರಾಜ್ಯದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಬಗ್ಗೆ ಜನರು ಆತಂಕಕ್ಕೀಡಾಗಿದ್ದಾರೆ. ಅಲ್ಲದೆ, ಮಾವಿನ ಹಣ್ಣಿಗೂ ಬೇಡಿಕೆ ಕುಸಿದು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಟನ್‍ಗಟ್ಟಲೆ ಮಾವನ್ನು ಕೊಳ್ಳುವವರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡಿರುವ ಮುಖ್ಯಮಂತ್ರಿ ಬೆಂಬಲ ಬೆಲೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಮಾವಿನ ಫಸಲನ್ನು ಕಳುಹಿಸಿಕೊಡಲು ಆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಬೆಳೆಗಾರರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಮಾವು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿನ ಮಾವು ಸಂಸ್ಕರಣಾ ಘಟಕಕ್ಕೆ ಮಾವು ಸರಬರಾಜು ಮಾಡಲು ಪ್ರಯತ್ನಿಸಿದೆ. ಆದರೆ ಮಹಾರಾಷ್ಟ್ರದಲ್ಲೂ ಹೆಚ್ಚಿನ ಬೆಳೆ ಬಂದಿದೆ. ಆಂಧ್ರ ಪ್ರದೇಶ ಸಿಎಂ ಜತೆ ಮಾತನಾಡಲು ಪ್ರಯತ್ನಿಸಿದೆ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅಮೇರಿಕಾದಲ್ಲೂ ಬೆಳೆ ಇಳುವರಿ ಹೆಚ್ಚಾಗಿದೆ. ಪ್ರತಿಬಾರಿ ಕೋಲಾರ ಶ್ರೀನಿವಾಸಪುರದಿಂದ ಚಿತ್ತೂರಿಗೆ ಮಾವು ರವಾನೆಯಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿಯೇ ಹೆಚ್ಚು ಬೆಳೆ ಬಂದ ಕಾರಣ ಚಿತ್ತೂರಿಗೆ ರಾಜ್ಯದ ಮಾವು ತರಿಸುವುದನ್ನು ಸ್ಥಗಿತಮಾಡಿದೆ ಎನ್ನುವ ಮಾಹಿತಿ ನೀಡಿದರು. ಆದರೂ ರೈತರಿಗೆ ಸಾಂತ್ವನ ಹೇಳಲು ಸರ್ಕಾರವೇ ಮಾರುಕಟ್ಟೆ ಪ್ರವೇಶಿಸಿ ಬೆಂಬಲ ಬೆಲೆ ಕೊಟ್ಟು ಮಾವು ಖರೀದಿಗೆ ಆದೇಶಿಸಲಾಗಿದೆ. ಪ್ರತಿ ಟನ್ ಗೆ 2000 ರೂ.ಬೆಲೆ ಘೋಷಿಸಿದ್ದು ಇದರಿಂದ ಸರ್ಕಾರಕ್ಕೆ 15-20ಕೋಟಿ ಹೆಚ್ಚಿನ ಹೊರೆಯಾಗುತ್ತದೆ. ವಿಧಾನಸಭೆ ಕಲಾಪ ಮುಗಿದ ಬಳಿಕ ರಾಜ್ಯದಲ್ಲಿ ಮಾವು ಸಂಸ್ಕರಣ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
Comments