ರೈತರ ಸಾಲ ಮನ್ನಾ ಮಾಡಿದ ಸಿಎಂ ಎಚ್'ಡಿಕೆ ರಾಮನಗರದ ಜನತೆಯಿಂದ ಹಾಲಿನ ಅಭಿಷೇಕ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಚೂಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.
ರೈತರ ಸಾಲ ಮನ್ನಾ ಮಾಡುವ ಬಗ್ಗೆ ಘೋಷಣೆ ಮಾಡಿದ ಹಿನ್ನಲೆಯಲ್ಲಿ ರಾಮನಗರದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ರಾಮನಗರದ ಐಜೂರು ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಎಚ್.ಡಿ.ಕೆ ಅಭಿಮಾನಿ ಬಳಗದ ಸದಸ್ಯರು ಸಿಹಿ ವಿತರಣೆ ಮಾಡಿ, ಕುಮಾರಣ್ಣ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ತಮ್ಮ ಮುಖ್ಯಮಂತ್ರಿ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್, 'ಈ ಬಜೆಟ್‌ನಲ್ಲಿ ರೈತರ ಬಹುದಿನದ ಬೇಡಿಕೆಯಾಗಿದ್ದ 2 ಲಕ್ಷ ವರೆಗಿನ ಎಲ್ಲಾ ಸುಸ್ತಿ ಬೆಳೆ ಸಾಲ ಮನ್ನಾ ಮಾಡುವುದರ ಮೂಲಕ ರೈತರ ಬಗ್ಗೆ ಇರುವ ಕಾಳಜಿಯನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ' ಎಂದರು.
ರಾಮನಗರಕ್ಕೆ ಖಾಸಗಿ ಸಹ ಭಾಗಿತ್ವದಲ್ಲಿ ಚಲನಚಿತ್ರ ವಿಶ್ವ ವಿದ್ಯಾಲಯ, 300 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಆರ್ಟ್ಸ್ ಅಂಡ್ ಕ್ರಾಪ್ಟ್ ವಿಲೇಜ್, ಇನ್ನು ಕನಕಪುರ ದಲ್ಲಿ ವೈದ್ಯಕೀಯ ಕಾಲೇಜು, ಚನ್ನಪಟ್ಟಣದಲ್ಲಿ ರೇಷ್ಮೆ ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ 5 ಕೋಟಿ ಮಂಜೂರು ಮಾಡಿದ್ದಾರೆ. ಇವೆಲ್ಲ ನಮ್ಮ ಜಿಲ್ಲೆಗೆ ಸಿಕ್ಕ ಕೊಡುಗೆಯಾಗಿದೆ' ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್, ಸುಗ್ಗನಹಳ್ಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಕೃಷ್ಣ, ಜಿಲ್ಲಾ ಜೆಡಿಎಸ್ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಜಿ.ಕೆ.ಗಂಗಾಧರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments