ಬಜೆಟ್ ಮಂಡನೆಯಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಸಿಹಿ ಸುದ್ದಿ..!!

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದಿಂದ ರಾಜ್ಯ ಸರ್ಕಾರಿ ನೌಕರರಿಗೆ ಸೋಮವಾರ (ಜೂನ್ 18) ಮಧ್ಯಾಹ್ನದ ವೇಳೆಗೆ ಶುಭ ಸುದ್ದಿ ಸಿಕ್ಕಿದೆ.
ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಂದಿನ ಬಜೆಟ್ ಗೆ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೆ ಸರ್ಕಾರಿ ನೌಕರರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ತುಟ್ಟಿಭತ್ಯೆ ಹೆಚ್ಚಳ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿದ್ದಾರೆ. ನೌಕರರ ಮೂಲ ವೇತನದ 4.25ರಷ್ಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಶೇ 1.75ರಷ್ಟು ಹೆಚ್ಚಳ ಮಾಡಲಾಗಿದೆ. ಜನವರಿ 01, 2018ರಿಂದ ಪೂರ್ವಾನ್ವಯವಾಗಲಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರವು ಕಳೆದ ದೀಪವಾಳಿ ಹಬ್ಬದ ವೇಳೆಗೆ ಶೇ2ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಿಸಿತ್ತು.
ಈ ಕೊಡುಗೆಯಿಂದ ಸುಮಾರು 6 ಲಕ್ಷ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಂದಾಜು 560 ಕೋಟಿ ರೂ. ಹೆಚ್ಚಿಗೆ ಹೊರೆಯಾಗಲಿದೆ. ರಾಜ್ಯ ಸರ್ಕಾರಿ ನೌಕರರು, ಜಿಲ್ಲಾ ಪಂಚಾಯತ್ ಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರು, ಸರ್ಕಾರದ ಸಹಾಯಾನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ತುಟ್ಟಿಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ. ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯವಾಗಲಿದೆ.
Comments