ರೈತರಿಗೆ ಗುಡ್ ನ್ಯೂಸ್ : ಬಜೆಟ್ ಮಂಡನೆ ಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್..! ಹೈಕಮಾಂಡ್ ನಿಂದ ಸಿದ್ದುಗೆ ಭಾರೀ ಮುಖಭಂಗ..!!
ಯಾರೂ ಎಷ್ಟೇ ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದೆ ಈಗಾಗಲೇ ನಿಗದಿಯಾಗಿರುವಂತೆ ಜು.5 ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲನೇಯ ಬಜೆಟ್ ಮಂಡನೆ ಹಾಗೂ ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ ತೋರಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಬಜೆಟ್ ಮಂಡನೆ ವಿರೋಧ ಮಾಡಿದ್ದರೂ ಅದನ್ನು ಲೆಕ್ಕಿಸದೆ ನಿಗದಿಯಾಗಿರುವ ದಿನಾಂಕದಂದೆ ಬಜೆಟ್ ಮಂಡಿಸಿ ಎರಡೂ ಪಕ್ಷಗಳ ಪ್ರಣಾಳಿಕೆ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡುವಂತೆ ಹೈಕಮಾಂಡ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ನಮಗೆ ರಾಜ್ಯದಲ್ಲಿ ಸುಸ್ಥಿರ ಹಾಗೂ ಜನಪರವಾದ ಸರ್ಕಾರವನ್ನು ಮುನ್ನೆಡೆಸುವ ಅಗತ್ಯವಿದೆ. ಯಾವುದೇ ನಾಯಕರು ಏನೇ ಹೇಳಿಕೆ ನೀಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಸರ್ಕಾರವನ್ನು ಅಸ್ಥಿರಗೊಳಿಸುವ ಯಾವ ಪ್ರಯತ್ನಗಳು ಈಡೇರುವುದಿಲ್ಲ. ಐದು ವರ್ಷಗಳ ಕಾಲ ನೀವು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೀರಿ. ಬಜೆಟ್ ಮಂಡನೆಗೆ ಸಿದ್ದತೆಯನ್ನುಮಾಡಿಕೊಳ್ಳುವಂತೆ ಹೈಕಮಾಂಡ್ ಕುಮಾರಸ್ವಾಮಿಗೆ ಸಲಹೆ ಮಾಡಿದೆ ಎಂದು ತಿಳಿದುಬಂದಿದೆ.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಂಡುಬಂದರೂ ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಬಜೆಟ್‍ನಲ್ಲಿ ಸೇರ್ಪಡೆ ಮಾಡಬೇಕಾದ ಕಾರ್ಯಕ್ರಮಗಳು, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಮತ್ತಿತರ ಪ್ರಮುಖ ತೀರ್ಮಾನಗಳ ಬಗ್ಗೆ ಸಾಮಾನ್ಯ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾಗಿರುವ ವೀರಪ್ಪ ಮೊಯ್ಲಿ ಜೊತೆ ಚರ್ಚಿಸಬೇಕು. ಕಳೆದ ಒಂದು ವಾರದಿಂದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ನಾವು ಗಮನಿಸುತ್ತಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕಾದ ಸಣ್ಣಪುಟ್ಟದಕ್ಕೂ ನಾವೇ ಮಧ್ಯಪ್ರವೇಶ ಮಾಡಿದರೆ ಸರಿ ಇರುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ಸರ್ಕಾರ ಪತನಗೊಳಿಸುತ್ತೇವೆ ಎಂದು ಯಾರಾದರೂ ಕನಸು ಕಂಡಿದ್ದರೆ ಅದು ಅವರ ಭ್ರಮೆಯಾಗುತ್ತದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಅಜಾದ್ ಕುಮಾರಸ್ವಾಮಿ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲೇ ಎಲ್ಲ ಸಮಸ್ಯೆಗಳನ್ನುಇತ್ಯರ್ಥಪಡಿಸಲಾಗುವುದು. ಯಾವುದಕ್ಕೂ ನೀವು ಆತಂಕಪಡುವ ಅಗತ್ಯವಿಲ್ಲ. ಪಕ್ಷವೇ ನಿಮಗೆ ಸಂಪೂರ್ಣ ಬೆಂಬಲ ನೀಡಿರುವುದರಿಂದ ಪೂರ್ಣಾವಧಿಯ ಬಗ್ಗೆ ಗಮನಹರಿಸಬೇಡಿ. ಎರಡೂ ಪಕ್ಷಗಳು ಜನತೆಯ ವಿಶ್ವಾಸವನ್ನು ಬೆಳೆಸುವತ್ತ ಗಮನಹರಿಸಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯುವುದಷ್ಟೇ ನಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ. ಸ್ವತಃ ಹೈಕಮಾಂಡ್‍ನಿಂದಲೇ ಕುಮಾರಸ್ವಾಮಿಗೆ ಸಂಪೂರ್ಣ ಬೆಂಬಲ ಮತ್ತು ಆತ್ಮವಿಶ್ವಾಸದ ಮಾತುಗಳು ಸಿಕ್ಕಿರುವ ಕಾರಣ ಕಾಂಗ್ರೆಸ್ ನಾಯಕರ ಯಾವುದೇ ಹೇಳಿಕೆಗೂ ತಲೆ ಕೆಡಿಸಿಕೊಳ್ಳದೆ ಬಜೆಟ್ ಮಂಡನೆಯತ್ತ ಮಗ್ನರಾಗಿದ್ದಾರೆ ಎಂದು ತಿಳಿದುಬಂದಿದೆ.
Comments