ನಿಗಮ-ಮಂಡಳಿ ಹಂಚಿಕೆ ಬಗ್ಗೆ ಸುಳಿವು..! ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

ಸಮ್ಮಿಶ್ರ ಸರ್ಕಾರದ ತನ್ನ ಕಾರ್ಯ ಆರಂಭಿಸಿ, ಬಜೆಟ್ ಮಂಡನೆಗಾಗಿ ತರಾತುರಿಯಲ್ಲಿ ತಯಾರಿ ನಡೆಸುತ್ತಿದೆ. ಈ ನಡುವೆ ನಿಗಮ-ಮಂಡಳಿಗಳ ಹಂಚಿಕೆ ಕುರಿತು ಇನ್ನೂ ವಿವರ ಮಾತುಕತೆ ಆರಂಭ ಆಗಿಲ್ಲ.
ಈವರೆಗಿನ ಸ್ಥೂಲ ಒಪ್ಪಂದದ ಪ್ರಕಾರ ಒಟ್ಟು 98 ನಿಗಮ-ಮಂಡಳಿಗಳ ಪೈಕಿ 32-33 ಸ್ಥಾನಗಳು (ಮೂರನೆಯ ಒಂದರಷ್ಟು) ಜಾತ್ಯತೀತ ಜನತಾದಳದ ಪಾಲಾಗಲಿದ್ದು, ಉಳಿದ ಮತ್ತು 64-65 (ಮೂರನೆಯ ಎರಡರಷ್ಟು) ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ. ಯಾವ ನಿಗಮ ಮತ್ತು ಯಾವ ಮಂಡಳಿ ಯಾವ ಪಕ್ಷಕ್ಕೆ ಹೋಗಬೇಕು ಎಂಬುದರ ಕುರಿತ ಮಾತುಕತೆ ಉಭಯ ಪಕ್ಷಗಳ ನಡುವೆ ಇನ್ನೂ ನಡೆದಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಜಾತ್ಯತೀತ ಜನತಾದಳದ ನಾಯಕರೂ ಆಗಿರುವ ಮುಖ್ಯಮಂತ್ರಿಯವರು ಸದ್ಯಕ್ಕೆ ಬಜೆಟ್ ಪೂರ್ವ ಸಭೆಗಳಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಮ್ಮಿಶ್ರ ಸರ್ಕಾರದ ಸಮಾನ ಕನಿಷ್ಠ ಕಾರ್ಯಕ್ರಮವನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ನಿಗಮ-ಮಂಡಳಿ ಕುರಿತ ಮಾತುಕತೆಗೆ ಸದ್ಯಕ್ಕೆ ಸಮಯವಿಲ್ಲ. ಕಾಂಗ್ರೆಸ್ ಅತೃಪ್ತ ಶಾಸಕರು ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿಯುವ ತನಕ ಕಾಯದೆ ವಿಧಿಯಿಲ್ಲ. ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಜುಲೈ 5ರಂದು ರಾಜ್ಯ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಕನಿಷ್ಠ ಹದಿನೈದು ದಿನಗಳ ಕಾಲವಾದರೂ ಈ ಅಧಿವೇಶನ ನಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ತನ್ನ ಪಾಲಿನ ಆರು ಖಾಲಿ ಸ್ಥಾನಗಳ ಪೈಕಿ ಸದ್ಯಕ್ಕೆ ನಾಲ್ಕನ್ನು ತುಂಬಿ ಎರಡನ್ನೂ ಖಾಲಿ ಉಳಿಸಿಕೊಳ್ಳುವ ತಂತ್ರವನ್ನು ಕಾಂಗ್ರೆಸ್ ಇತ್ತೀಚೆಗೆ ಕೈ ಬಿಟ್ಟಂತೆ ಕಾಣುತ್ತಿದೆ. ಇನ್ನು ನಿಗಮ ಮಂಡಳಿ ಹಂಚಿಕೆ ಕುರಿತು ಅಂತಿಮ ಸುತ್ತಿನ ಮಾತುಕತೆಯ ನಂತರ ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕುರಿತು ವರಿಷ್ಠರು ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.
Comments