ಜೂನ್ ೨೭ರಂದು ಕೆಂಪೇಗೌಡ ಜಯಂತಿ ಆಚರಣೆ
ನಗರದ ಪಿಎಲ್ ಡಿ ಬ್ಯಾಂಕ್ ಆವರಣದಲ್ಲಿ ಇಂದು ಸಭೆ ಸೇರಿದ ಮುಖಂಡರು ಕೆಂಪೇಗೌಡ ಜಯಂತಿ ಆಚರಣೆ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೆಂಪೇಗೌಡ ಜಯಂತಿಯನ್ನು ಸರಕಾರವೇ ನಡೆಸುತ್ತಿರುವುದರಿಂದ ಹಾಗೂ ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಎಂಬ ಕಾರಣಕ್ಕೆ ನಿರ್ಮಲಾನಂದನಾಥ ಸ್ವಾಮಿಗಳ ಸೂಚನೆಯ ಮೇರೆಗೆ ಸರಕಾರದ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯವತಿಯಿಂದ ಬಡೆಸಲಾಗುವ ಕೆಂಪೇಗೌಡ ಜಯಂತಿಯಲ್ಲಿ ತಾಲ್ಲೂಕಿನ ಜನಾಂಗ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಬೆಂಬಲಿಸಲಾಗುವುದು ಎಂದು ತೀರ್ಮಾನಕ್ಕೆ ಬಂದರು. ಪ್ರತ್ಯೇಕ ಕೆಂಪೇಗೌಡ ಜಯಂತಿಯನ್ನು ಆಚರಿಸದೆ ಜೂನ್ ೨೭ರಂದು ಬೆಳಿಗ್ಗೆ ೯ ಘಂಟೆಗೆ ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ನಗರದಲ್ಲಿ ಮೆರವಣಿಗೆಯ ಮೂಲಕ ಸಾಗಿ ತಾಲೂಕು ಕಛೇರಿಯಲ್ಲಿ ನಡೆಯುವ ಜಯಂತೋತ್ಸವದಲ್ಲಿ ಭಾಗವಹಿಸುವುದು ಮತ್ತು ಸಮುದಾಯದ ವತಿಯಿಂದ ಪ್ರತ್ಯೇಕ ದಿನವನ್ನು ಗೊತ್ತುಮಾಡಿ ಅದ್ದೂರಿಯಾಗಿ ಗುರುವಂದನಾ ಕಾರ್ಯಕ್ರಮ ಅಥವಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಸಮುದಾಯದ ಮಕ್ಕಳಿಗೆ, ಪ್ರಗತಿಪರ ರೈತರಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಯಿತು. ಕೆಂಪೇಗೌಡ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಸತ್ಯನಾರಾಯಣ ಗೌಡ, ನರಸಿಂಹಯ್ಯ, ಚುಂಚೇಗೌಡ, ಬೈರೇಗೌಡ, ಗೋವಿಂದರಾಜ್, ವೆಂಕಟಪ್ಪ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ್ ಹಾಜರಿದ್ದರು.
Comments