ವಾಹನ ದಟ್ಟಣೆ ತಡೆಯಲು ಹೊವಿನ ವ್ಯಾಪಾರಿಗಳ ಸ್ಥಳಾಂತರ
ನಗರದ ಡಿಕ್ರಾಸ್ ವೃತ್ತದಲ್ಲಿ ಹೊವಿನ ವ್ಯಾಪಾರದಿಂದಾಗಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ತಡೆಯಲು ಹೊವಿನ ಮಾರಾಟಗಾರರಿಗೆ ನಗರದ ಆರ್ ಎಂ ಸಿ ಯಾರ್ಡ್ ನಲ್ಲಿ ಪ್ರತ್ಯೇಕ ಸ್ಥಳವನ್ನು ಕಲ್ಪಿಸಲಾಗಿದ್ದು, ವ್ಯಾಪಾರಸ್ಥರು ಇಲ್ಲಿಯೇ ವ್ಯಾಪಾರ ನಡೆಸಬೇಕೆಂದು ನಗರ ಪೋಲೀಸ್ ಠಾಣೆಯ ಎಸ್ ಐ ಬಿ.ಕೆ.ಪಾಟಿಲ್ ತಿಳಿಸಿದರು. ನಗರದ ಕೆಲವು ಪ್ರಮುಖ ರಸ್ತೆಗಳ ಬದಿಯಲ್ಲಿ ಹೊವಿನ ವ್ಯಾಪಾರಸ್ಥರು ತಮ್ಮ ವಹಿವಾಟನ್ನು ಮಾಡುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು, ಪ್ರಮುಖವಾಗಿ ನಗರದ ಡಿ.ಕ್ರಾಸ್ ವೃತ್ತದಲ್ಲಿ ಹೊವಿನ ಮಾರಾಟಗಾರರು ವೃತ್ತದ ಬದಿಯಲ್ಲಿ ತಮ್ಮ ವಹಿವಾಟು ನಡೆಸುತ್ತಿದ್ದರು, ದೇವನಹಳ್ಳಿ, ಹಿಂದೂಪುರ, ತುಮಕೂರು, ಚ್ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ಬಸ್ ಗಳು ಇದೇ ವೃತ್ತದ ಮೂಲಕ ಬರುತ್ತಿದ್ದು ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿತ್ತು, ಸದ್ಯ ಹೊವಿನ ಮಾರಾಟಗಾರರು ಆರ್ ಎಂ ಸಿ ಯಾರ್ಡ್ ನಲ್ಲಿ ವಹಿವಾಟನ್ನು ನಡೆಸುವುದರ ಮೂಲಕ ಸಹಕರಿಸಲು ಕೋರಿದರು.
ಮಾರುಕಟ್ಟೆ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ ಯಾರ್ಡ್ ನಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರಿಗೆ ಸದ್ಯದಲ್ಲೇ ನೂತನ ಯಾರ್ಡ್ ಸಿದ್ಧವಾಗಲಿದೆ, ಮಾರಾಟ ಮಾಡುವ ಪ್ರತಿಯೊಬ್ಬರಿಗೂ ಸೂಕ್ತ ಸ್ಥಳವನ್ನು ನೀಡಲಾಗುತ್ತಿದ್ದು, ನಿಗದಿ ಪಡಿಸಿದ ಸ್ಥಳದಲ್ಲಿ ಅವರ ವಹಿವಾಟನ್ನು ಮಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಪುನಃ ನಗರದ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ತೊಂದರೆ ಕೊಡಬಾರದು ಎಂದು ಹೇಳಿದರು. ಇದೇ ಸಮಯದಲ್ಲಿ ಸುಮಾರು ಐವತ್ತೈದಕ್ಕೂ ಹೆಚ್ಚು ಮಂದಿ ಹೊವಿನ ವ್ಯಾಪಾರಿಗಳನ್ನು ಗುರುತಿಸಲಾಯಿತು.
Comments