ಬಜೆಟ್ ಮಂಡನೆಯಲ್ಲಿ ರೈತರಿಗೆ ಸಿಗಲಿದೆ ಬಂಪರ್ ಗಿಫ್ಟ್..! ಭತ್ತದ ನಾಟಿ ಕುರಿತು ಎಚ್'ಡಿಕೆ ಮಾಸ್ಟರ್ ಪ್ಲಾನ್..!

ರೈತರ ಸಾಲಮನ್ನಾದ ವಿಚಾರಕ್ಕೆ ಸಂಬಂಧಪಟ್ಟ ರಾಜ್ಯದ ಜನತೆಯಲ್ಲಿ ಹದಿನೈದು ದಿನದ ಸಮಯ ಕೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದೀಗ ಸಾಲಮನ್ನಾದ ಪ್ರಮಾಣವನ್ನು ಮುಂದಿನ ಬಜೆಟ್‌ನಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಾಲಮನ್ನಾ ವಿಚಾರವಾಗಿ ಈಗಾಗಲೇ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು ಎಷ್ಟುಸಾಲವಿದೆ, ಯಾವ ರೀತಿ ಮಾಡಬೇಕು ಎಂದು ವರದಿ ಪಡೆದುಕೊಳ್ಳಲಾಗುತ್ತಿದೆ ಎಂದರು. ಬೇರೆ ಪಕ್ಷಗಳ ಮುಖಂಡರಂತೆ ನಾನು ಪಲಾಯನವಾದಿಯಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಬದ್ಧನಾಗಿದ್ದೇನೆ' ಎಂದರು.
ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಯಾವ ಬ್ಯಾಂಕ್‌ಗಳಲ್ಲಿ ರೈತರ ಎಷ್ಟು ಸಾಲವಿದೆ ಎಂಬ ಮಾಹಿತಿ ಪಡೆಯುತ್ತಿದ್ದೇನೆ. ರೈತರು ಭಯ ಪಡಬೇಕಾಗಿಲ್ಲ. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆಗೆ ಶರಣಾದರೆ ಕೆಲಸ ಮಾಡುವ ನನ್ನ ಹುಮ್ಮಸ್ಸು ಕುಸಿಯುತ್ತದೆ. ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ತಾಳ್ಮೆಯಿಂದ ಇರಬೇಕು' ಎಂದೂ ಮನವಿ ಮಾಡಿದರು. ಅಧಿಕಾರಕ್ಕಾಗಿ ಪೂಜೆ ಮಾಡುತ್ತಿಲ್ಲ, ರಾಜ್ಯದ ಜನರ ನೆಮ್ಮದಿಗಾಗಿ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ ಎಂಬ ಅರಿವು ನನಗಿದೆ' ಎಂದರು. ಇದೇ ವೇಳೆ ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ಬಗ್ಗೆಯೂ ಮಾತನಾಡಿದ ಅವರು, ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಈ ಪದ್ಧತಿ ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಎರಡು, ಮೂರು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿಲ್ಲ. ಹಿಂದಿನ ಸರ್ಕಾರಗಳು ರೈತರಿಗೆ ಹುರುಳಿ ಚೆಲ್ಲುವ ಸಲಹೆ ನೀಡಿದ್ದವು. ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಸಾಕಷ್ಟುಮಳೆಯನ್ನು ಕಂಡಿದ್ದೇನೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಖುದ್ದು ಪಾಲ್ಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ, ಕೃಷಿ ಇಲಾಖೆಯಿಂದ ಪರಿಹಾರಧನ ಪಡೆದುಕೊಂಡ ರೈತರ ಪತ್ನಿಗೆ ಮಾತ್ರ ವಿಧವಾ ವೇತನ (ಪಿಂಚಣಿ) ನೀಡಲಾಗುತ್ತಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರ 2016ರ ಮೇ ತಿಂಗಳಿನಿಂದ ಆರಂಭಿಸಿದೆ. ಈವರೆಗೆ 3,398 ಅರ್ಜಿಗಳು ಬಂದಿದ್ದು, 3,231 ಕುಟುಂಬಗಳಿಗೆ ಸದ್ಯ ಪಿಂಚಣಿ ವಿತರಿಸಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ತಿಳಿಸಿದೆ.
Comments