ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ರವರಿಗೆ ಒಲಿದಿದೆ ಈ ಖಾತೆ..!!
ಹಿರಿಯ ಮುಖಂಡ, ಜೆಡಿಎಸ್ ನಾಯಕ ಎಚ್.ವಿಶ್ವನಾಥ್ ಅವರಿಗೆ ಸದ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಖಾತೆ ದೊರೆಯುವ ಸಂಭವವಿದೆ. ಈ ಹಿಂದೆ ಸಚಿವರಾಗಿದ್ದ ವೇಳೆ ಈ ಖಾತೆಯನ್ನು ಉತ್ತಮವಾಗಿ ನಿರ್ವಹಿಸಿ, ಒಂದಷ್ಟು ಸುಧಾರಣೆಗಳನ್ನು ಮಾಡಿದ ಖ್ಯಾತಿ ಇವರಿಗಿದೆ.
ಸದ್ಯದ ಮಾಹಿತಿ ಪ್ರಕಾರ ಪ್ರಮಾಣ ವಚನ ಸಮಾರಂಭಕ್ಕೆ ವಿಶ್ವನಾಥ್ ಅವರು ಸಿದ್ಧರಾಗಿದ್ದು, ಜೂನ್ 6ರಂದು ಬುಧವಾರ ಮಧ್ಯಾಹ್ನ ನೂತನ ಸಮಿಶ್ರ ಸರ್ಕಾರದ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಮುನ್ನ ಹುಣಸೂರು ಕ್ಷೇತ್ರದ ದಿವಂಗತ ದೇವರಾಜ ಅರಸರ ಕರ್ಮಭೂಮಿ ಕಲ್ಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 7 ಗಂಟೆಗೆ ತೆರಳಿ ಅರಸರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 9 ಗಂಟೆಗೆ ಹುಣಸೂರು ನಗರದ ಎಪಿಎಂಸಿ ಬಳಿಯಿರುವ ಅರಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ರಾಜಕಾರಣದಿಂದ ಕೇಂದ್ರದತ್ತ ಮುಖ ಮಾಡಿದ್ದ ಎಚ್.ವಿಶ್ವನಾಥ್ ಅವರನ್ನು ಕೊಡಗು ಮತ್ತು ಮೈಸೂರು ಜನರು ಆಶೀರ್ವಾದ ಮಾಡಿ ಲೋಕಸಭೆಗೆ ಆರಿಸಿ ಕಳುಹಿಸಿದ್ದರು. ಸುಮಾರು ಐದು ವರ್ಷಗಳ ಕಾಲದ ಅವಧಿಯಲ್ಲಿ ಕಾಂಗ್ರೆಸ್‍ನಲ್ಲಿ ಅತಿ ಚಟುವಟಿಕೆಯಲ್ಲಿದ್ದ ಸಂಸದ ಅವರಾಗಿದ್ದರು. ಅವರ ಪ್ರತಿ ಹೇಳಿಕೆಗಳು ರಾಜ್ಯದಲ್ಲಿ ಸುದ್ದಿ ಮಾಡುತ್ತಿದ್ದವು. ಅವರ ಸುದ್ದಿಗೋಷ್ಠಿ ಎಂದರೆ ಮಾಧ್ಯಮದವರು ಕಿಕ್ಕಿರಿದು ಸೇರುತ್ತಿದ್ದರು.
Comments