ಕಾಂಗ್ರೆಸ್ ಗೆ 22, ಜೆಡಿಎಸ್ 12 ಸಚಿವ ಸ್ಥಾನ....ಯಾರ್ಯಾರಿಗೆ ಯಾವ ಸ್ಥಾನ..!?
ಜೆಡಿಎಸ್‌ಗೆ ಸಿಎಂ ಹುದ್ದೆಯೂ ಸೇರಿದಂತೆ 12 ಸಚಿವ ಸ್ಥಾನ. ಕಾಂಗ್ರೆಸ್ ಡಿಸಿಎಂ ಹುದ್ದೆ ಸೇರಿ 22 ಸಚಿವ ಸ್ಥಾನ, ಸ್ಪೀಕರ್ ಹುದ್ದೆ ಕಾಂಗ್ರೆಸ್ಸಿಗೆ, ಡೆಪ್ಯುಟಿ ಸ್ಪೀಕರ್ ಹುದ್ದೆ ಜೆಡಿಎಸ್'. ಇದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಉಭಯ ಪಕ್ಷಗಳ ನಾಯಕರು ಮಾಡಿರುವ ಮೊದಲ ಅಧಿಕಾರ ಹಂಚಿಕೆಯ ಒಪ್ಪಂದ.
ನಿಯೋಜಿತ ಮುಖ್ಯಮಂತ್ರಿ ಎಚ್,ಡಿ.ಕುಮಾರಸ್ವಾಮಿ ಅವರು ಬುಧವಾರ ಪದಗ್ರಹಣ ಹಿನ್ನಲೆಯಲ್ಲಿ ಮಂಗಳವಾರ ನಡೆದ ಎರಡು ಪಕ್ಷಗಳ ನಾಯಕರ ಸಭೆಯಲ್ಲಿ ಈ ಸೂತ್ರ ಸಿದ್ದಗೊಂಡಿದೆ. ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ 34 ಸಚಿವ ಸ್ಥಾನಗಳ ಪೈಕಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ 12 ಸ್ಥಾನಗಳು ಜೆಡಿಎಸ್‌ಗೆ ಮತ್ತು ಉಪಮುಖ್ಯಮಂತ್ರಿ, ಸ್ಪೀಕರ್ ಹುದ್ದೆ ಸೇರಿದಂತೆ 22 ಸಚಿವ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಬುಧವಾರ ಎಚ್.ಡಿ. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಖ್ಯಮಂತ್ರಿ ಅವರ ವಿಶ್ವಾಸ ಮತ ಸಾಬೀತು ಬಳಿಕ ಸಚಿವ ಸ್ಥಾನ, ಖಾತೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸ್ಪೀಕರ್ ಹುದ್ದೆ ಕಾಂಗ್ರೆಸ್‌ಗೆ ಲಭಿಸಿದೆ. ಮಾಜಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಅವರು ಸ್ಪೀಕರ್ ಆಗಲಿದ್ದಾರೆ. ಉಪ ಸಭಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಮುಖ್ಯಮಂತ್ರಿ ಅವರ ವಿಶ್ವಾಸ ಮತ ಸಾಬೀತು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಚಿವ ಸ್ಥಾನ ಮತ್ತು ಖಾತೆಗಳ ಹಂಚಿಕೆ ನಡೆಸಲಾಗುವುದು. ಅದೇ ರೀತಿ ಸಮನ್ವಯ ಸಮಿತಿ ಕೂಡ ರಚನೆಯಾಗಲಿದ್ದು, ಒಂದೆರಡು ದಿನಗಳಲ್ಲಿ ಸಮನ್ವಯ ಸಮಿತಿಯ ಪಟ್ಟಿಯನ್ನೂ ಪ್ರಕಟಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.
Comments