ನಾಳೆ ಎಚ್’ಡಿಕೆ ಜತೆ 6 ಶಾಸಕರು ಪ್ರಮಾಣವಚನ ಸ್ವೀಕಾರ…. ಯಾರಿಗೆ ಯಾವ ಸ್ಥಾನ..!?

22 May 2018 11:31 AM |
15330 Report

ರಾಜ್ಯದ ಮುಖ್ಯಮಂತ್ರಿಯಾಗಿ ನಾಳೆ ಸಂಜೆ ಎಚ್.ಡಿ.ಕುಮಾರಸ್ವಾಮಿ ಮಾತ್ರವಲ್ಲ, ಇನ್ನೂ ಐದಾರು ಸಚಿವರು ಪ್ರಮಾಣ ವಚನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಾಳೆ ನಾನೊಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಿಲ್ಲ. ನನ್ನ ಜೊತೆ ಕೆಲವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ .ಯಾರು, ಏನು ಅನ್ನೋದು ಸಂಜೆ ನಿರ್ಧಾರವಾಗಲಿದೆ ಎಂದು ನಿಯೋಜಿತ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ನಾಳೆ ಸಂಜೆ 4.30ಕ್ಕೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಜತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ 5 ರಿಂದ 6 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ನಿರೀಕ್ಷೆಯಂತೆ ಆದರೆ ಹೆಚ್.ಡಿ.ರೇವಣ್ಣ, ರಾಮಲಿಂಗಾರೆಡ್ಡಿ, ಹೆಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಎ.ಟಿ.ರಾಮಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಪಟ್ಟ ಅಲಂಕರಿಸಿದ ನಂತರ ನಡೆಯಬೇಕಿರುವ ಸಚಿವ ಸಂಪುಟ ಸಭೆಯಲ್ಲಿ ಏಕಾಂಗಿಯಾಗಿ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಸಚಿವರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲು ನಿಯೋಜಿತ ಸಿಎಂ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದು, ಇದಕ್ಕಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಎಂ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಹಂಗಾಮಿ ಸ್ಪೀಕರ್ ನೇಮಕ ಆಗಬೇಕು. ವಿಶ್ವಾಸಮತ ಸಾಬೀತಿಗೆ ದಿನ ನಿಗದಿಪಡಿಸಬೇಕು. ಇದೆಲ್ಲಾ ಕಾರಣಕ್ಕೆ ಕೆಲ ಅನುಭವಿಗಳ ಜತೆ ಚರ್ಚೆ ನಡೆಸಬೇಕಿದೆ. ಇದರಿಂದ ಕುಮಾರಸ್ವಾಮಿ ಈ ನಿಲುವು ಕೈಗೊಂಡಿದ್ದಾರೆ ಎನ್ನಲಾಗಿದೆ.

Edited By

Shruthi G

Reported By

hdk fans

Comments