ಬಿಜೆಪಿ ಜೊತೆ ಮೈತ್ರಿ ನಿರಾಕರಿಸಲು ಸ್ಪೋಟಕ ಕಾರಣ ಬಿಚ್ಚಿಟ್ಟ ಎಚ್ ಡಿಕೆ
ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ ಬಹುಮತ ಸಾಬೀತು ಮಾಡಲು ಅವಕಾಶ ನೀಡಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಕೆಂಡಾಮಂಡಲ ಆಗಿದ್ದಾರೆ.
ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆ ಆಹ್ವಾನ ಮಾಡಿ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿರುವ ಬೆನ್ನಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು, ಬಿಜೆಪಿ ತನ್ನ ನಿಜ ಬಣ್ಣ ಬಯಲು ಮಾಡುತ್ತಿದೆ, ರಾಜ್ಯಪಾಲರು ತಮ್ಮ ನಿರ್ಣಯದಿಂದ ಆಪರೇಷನ್ ಕಮಲಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಕರೆದುದ್ದರ ಬಗ್ಗೆ ಬೇಸರವಿಲ್ಲ ಆದರೆ ಅವರು ನಿಯಮದ ಪ್ರಕಾರ ಬಹುಮತ ಸಾಬೀತು 4-6 ದಿನ ಕಾಲಾವಕಾಶ ಕೊಡಬೇಕಿತ್ತು ಆದರೆ ಬಿಜೆಪಿಯು ಶಾಸಕರನ್ನು ಹಣದ ಬಲದಿಂದ ಕೊಂಡುಕೊಳ್ಳಲಿ ಎಂಬ ಕಾರಣಕ್ಕೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದರು.
ಮಣಿಪುರದಲ್ಲಿ, ಮೇಘಾಲಯದಲ್ಲಿ, ಬಿಹಾರದಲ್ಲಿ, ಗೋವಾದಲ್ಲಿ ಹೀಗೆ ಒಂದೊಂದು ಕಡೆ ಒಂದೊಂದು ರೀತಿ ಬಿಜೆಪಿ ಅವಕಾಶವಾದಿ ರಾಜಕಾರಣ ಮಾಡಿದೆ ಇಲ್ಲಿ ರಾಜ್ಯಪಾಲರ ಮೂಲಕ ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿಯವರು ಸಂವಿಧಾನಕ್ಕೆ ಬೆಲೆ ಕೊಡುವುದಿಲ್ಲ ಎಂಬುದು ಇಂದಿನ ರಾಜ್ಯಪಾಲರ ನಿರ್ಣಯದಿಂದ ಗೊತ್ತಾಗಿದೆ. ಹಾಗಾಗಿ ನಾವು ಇದರ ವಿರುದ್ಧ ಕಾನೂನಾತ್ಮಕವಾಗಿ ಹೊರಾಟ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ಗುಜರಾತ್‌ನಿಂದ ಈಗಾಗಲೇ ಮೋದಿ ಅವರು ತಮ್ಮ ಗುಜರಾತ್ ಗೆಳೆಯರ ಕೈಗೆ ಹಣದ ಮೂಟೆಗಳನ್ನು ಕೊಟ್ಟು ಕಳುಹಿಸಿದ್ದಾರೆ. ಆಪರೇಷನ್ ಕಮಲದಂತಹಾ ನೀಚ ರಾಜಕಾರಣ ಮಾಡಲು ಮೋದಿ ಸೂಚಿಸಿದಂತಿದೆ. ಅಧಿಕಾರ ಹಿಡಿಯಲು ಸಂವಿಧಾನವನ್ನೂ ಅವರು ಮೀರಿದ್ದಾರೆ ಎಂದು ಅವರು ಹೇಳಿದರು. ಬಿಜೆಪಿಯ ಈ ರೀತಿಯ ಅವಕಾಶವಾದಿ ರಾಜಕಾರಣ, ಹಿಂದಿನ ಬಾಗಿಲಿನ ರಾಜಕಾರಣದಿಂದಲೇ ಅವರೊಂದಿಗೆ ನಾನು ಮೈತ್ರಿಗೆ ಹೋಗಲಿಲ್ಲ ಎಂದ ಕುಮಾರಸ್ವಾಮಿ ದೇಶವನ್ನು ಉದ್ಧಾರ ಮಾಡುತ್ತೇನೆ ಎನ್ನುವ ಮೋದಿ ಅವರು ಮಾಡುವ ನೀಚ ರಾಜಕಾರಣದ ಅರಿವು ಈಗಲಾದರೂ ರಾಜ್ಯದ ಜನತೆಗೆ ಆಗಬೇಕು ಎಂದರು.
Comments