ಆಪರೇಷನ್ ಕಮಲ ಕುರಿತು ಬಿಜೆಪಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್ ಡಿಕೆ
ಜೆಡಿಎಸ್‍ನಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ, ಎಲ್ಲಾ ಶಾಸಕರು ಒಟ್ಟಾಗಿ ನಮ್ಮ ಜೊತೆಯಲ್ಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ಜೊತೆ ಮತ್ತೆ ಮೈತ್ರಿ ಇಲ್ಲವೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಕೂಡ ಮೈತ್ರಿಗೆ ಮುಂದಾಗಿದೆ. ಆದರೆ ತಂದೆ ದೇವೇಗೌಡರ ಆದೇಶ ಮೀರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಮಿತ್ ಶಾ ಏನು ಬೇಕಾದ್ರೂ ಹೇಳಿಕೊಳ್ಳಲಿ. ನಾನು ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ದೇಶದ ಅನೇಕ ನಾಯಕರಿಂದ ದುಡುಕಬೇಡಿ ಎಂಬ ಕರೆ ಬಂದಿದೆ. ಆದರೆ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯ 10-15 ಮಂದಿ ಜೆಡಿಎಸ್ ಗೆ ಬರಲು ಸಿದ್ಧವಾಗಿದ್ದಾರೆ. ಬಿಜೆಪಿ ಅಶ್ವಮೇಧ ಕುದುರೆ ಕಟ್ಟಿ ಹಾಕುವ ಶಕ್ತಿ ಜೆಡಿಎಸ್ ಗೆ ಮಾತ್ರ ಇದೆ. ಬಿಜೆಪಿ ಆಪರೇಷನ್ ಕಮಲಕ್ಕಿಳಿದರೆ ಬಿಜೆಪಿಗೆ ನಷ್ಟ. ಹಣ ಕೊಟ್ಟು ಖರೀದಿ ಮಾಡಬೇಡಿ. ನಾವು ಕಣಕ್ಕಿಳಿದರೆ ನಿಮಗೇ ಕಷ್ಟ. ನಾವೂ ಆಪರೇಷನ್ ಜೆಡಿಎಸ್ ಮಾಡಬೇಕಾಗುತ್ತದೆ ಎಂದು ಬಿಜೆಪಿಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಲ್ಲ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನ ಮಾಡ್ತಿದೆ. ಬಿಜೆಪಿ ಕುದುರೆ ವ್ಯಾಪಾರ ಶುರು ಮಾಡಿದ್ರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ನಾನು ಸನ್ಯಾಸಿಯಲ್ಲ. ಹೋರಾಟ ಅನಿವಾರ್ಯ. ಯಡಿಯೂರಪ್ಪನವರಿಗೆ ಬಹುಮತವೇ ಇಲ್ಲ. ಹೇಗೆ ಅಧಿಕಾರ ಸ್ವೀಕಾರ ಮಾಡ್ತಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಕೇಳಿದ್ದಾರೆ. ಈವರೆಗೂ ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿ ಮಾಡಿಲ್ಲವೆಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಗೆ ಅಂತಿಮ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟಿದ್ದು. ಅವರ ತೀರ್ಮಾನವೇ ಅಂತಿಮ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಮತ ಹಾಕಿದ ಎಲ್ಲ ಮತದಾರರಿಗೂ ಕುಮಾರಸ್ವಾಮಿ ಧನ್ಯವಾದ ಹೇಳಿದರು. ರಾಮನಗರ, ಚನ್ನಪಟ್ಟಣದ ಜನರಿಗೆ ನಾನು ಅಭಾರಿ ಎಂದರು.
Comments