ಸರ್ಕಾರ ರಚನೆ ಬಗ್ಗೆ ಜೆಡಿಎಸ್ ದಳಪತಿ ಹೇಳಿದ್ದೇನು?



ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಮತದಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉದ್ಬವಿಸುವ ಪ್ರಶ್ನೆಯೇ ಇಲ್ಲ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಮತದಾನ ಮಾಡಿದ ಸಂದರ್ಭದಲ್ಲಿ ಅವರು ಪತ್ರಕರ್ತರ ಜೊತೆಗೆ ಮಾತನಾಡಿದರು. ನಾಲ್ಕು ತಿಂಗಳಿನಿಂದ ರಾಜ್ಯದಾದ್ಯಂತ ಪ್ರವಾಸ ಮಾಡಿ ನಾಡಿನ ಜನರ ಭಾವನೆ ಅರ್ಥಮಾಡಿಕೊಂಡಿದ್ದೇನೆ. ರಾಷ್ಟ್ರೀಯ ಪಕ್ಷಗಳು ಹೊರ ರಾಜ್ಯಗಳಿಂದ ನಾಯಕರನ್ನು ಕರೆತಂದು ಭಾಷಣ ಮಾಡಿಸಿದರೂ ಜನರ ಒಲವು ಜೆಡಿಎಸ್ ಕಡೆಗೆ ಇದೆ. ಅದರಲ್ಲೂ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದಾರೆ’ ಎಂದರು. ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿ, ಕಾಂಗ್ರೆಸ್ ಜೊತೆ ಕೈ ಜೋಡಿಸುವುದಿಲ್ಲ. ಯಾರ ಮನೆಯ ಬಾಗಿಲಿಗೂ ನಾನು ಹೋಗುವುದಿಲ್ಲ. ಅವರೂ ನನ್ನ ಮನೆ ಬಾಗಿಲಿಗೆ ಬರುವುದು ಬೇಡ’ ಎಂದರು. ಉತ್ತರ ಕರ್ನಾಟಕ ಭಾಗದಲ್ಲಿಯೂ ಪಕ್ಷವು ಕನಿಷ್ಠ 26–32 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳುವುದಾಗಿ ತಿಳಿಸಿದರು.
Comments