'ಕೈ' ರಾಜ್ಯಾಧ್ಯಕ್ಷನಿಗೆ ತಿರುಗೇಟು ಕೊಟ್ಟ ಜೆಡಿಎಸ್ ದಳಪತಿ
ಕಾಂಗ್ರೆಸ್ಸಿಗರು ಜೆಡಿಎಸ್ ಬಿಜೆಪಿಯ ಬಿ.ಟೀಮ್, ಬಿಜೆಪಿಯವರು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ಜೆಡಿಎಸ್ ಯಾರ ಪರ ಹೇಳಿ ಎಂದು ರಾಹುಲ್ ಗಾಂಧಿ ದೇವೇಗೌಡರನ್ನು ಕೇಳುತ್ತಿದ್ದಾರೆ. ನಾವು ಯಾರ ಪರಾನೂ ಇಲ್ಲ. ಆರೂವರೆ ಕೋಟಿ ಕನ್ನಡಿಗರ ಪರ. ನಾನು ರಾಹುಲ್ ಗಾಂಧಿಯ ಗುಲಾಮ ಅಲ್ಲ, ಆರುವರೆ ಕೋಟಿ ಜನತೆಯ ಗುಲಾಮ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಸಂವಿಧಾನ ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿ ಈಗ ಮಹಾದಾಯಿ ನೀರು ಹಂಚಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಹೇಮಾವತಿ, ನೇತ್ರಾವತಿ ನದಿ ಜೋಡಣೆ ಬಗ್ಗೆ ಮೇ.9ಕ್ಕೆ ಜಿಲ್ಲೆಗೆ ಬಂದಾಗ ಮಾತನಾಡಬಹುದು. 11 ವರ್ಷದಿಂದ ಕರಗಡ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗದ ಕಾಂಗ್ರೆಸ್ ಹಾಗೂ ಬಿಜೆಪಿಗರು ಕರಗಡ ಭಾಗದ ರೈತರಿಗೆ ನೀರು ಕೊಡುತ್ತಾರ ಎಂದು ಪ್ರಶ್ನಿಸಿದರು. ಸೀರೆ, ಮಿಕ್ಸಿ, ಹೆಂಡ ಹಂಚಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಬಿಜೆಪಿಗೆ ಮತಹಾಕಿ ನಿಮ್ಮ ಕುಟುಂಬವನ್ನು ಹಾಳು ಮಾಡಿಕೊಳ್ಳಬೇಡಿ. ಎಸ್.ಎಲ್. ಧಮೇಗೌಡ, ಬೋಜೆಗೌಡ ಮಾರಾಟವಾಗಿದ್ದಾರೆಂದು ಬಿಜೆಪಿಗರು ಆರೋಪಿಸಿದ್ದಾರೆ. ಅವರು ಯಾರಿಗೂ ಮಾರಾಟವಾಗಿಲ್ಲ. ಇಂತಹ ಅಪಪ್ರಚಾರ ನಿಲ್ಲಿಸಿ, ಮೂರು ಬಾರಿ ಶಾಸಕರಾಗಿರುವ ಸಿ.ಟಿ ರವಿಯನ್ನು ಸೋಲಿಸುವ ಉದ್ದೇಶದಿಂದಲೇ ಬಿ.ಹೆಚ್ ಹರೀಶ್‍ನನ್ನು ಕಣಕ್ಕಿಳಿಸಲಾಗಿದೆ ಎಂದರು.
ಜೆಡಿಎಸ್ ಮುಖಂಡ ಎಸ್.ಎಲ್. ಧಮೇಗೌಡ ಮಾತನಾಡಿ, ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಕ್ಷೇತ್ರದ ಸಖರಾಯಪಟ್ಟಣ, ಲಖ್ಯಾ ಭಾಗಕ್ಕೆ ಕರಗಡ ಏತ ನೀರಾವರಿ ಯೋಜನೆ ನೀರು ಹರಿಸಲು ಮತ್ತು ಐಯ್ಯನಕೆರೆ, ಮದಗದ ಕೆರೆಗೆ ನೀರು ತುಂಬಿಸಿ ಈ ಭಾಗದ ಸಮಸ್ಯೆ ಪರಿಹಾಕ್ಕೆ ಕುಮಾರಸ್ವಾಮಿಯವರು ಬದ್ಧವಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ, ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್, ಜೆಡಿಎಸ್ ಮುಖಂಡರಾದ ಎಸ್.ಎಲ್. ಧಮೇಗೌಡ, ಬೋಜೇಗೌಡ, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಹೆಚ್. ಹೆಚ್. ದೇವರಾಜ್, ಹೊಲದಗದ್ದೆ ಗಿರೀಶ್ ಇದ್ದರು.
Comments